Advertisement

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

09:02 PM Nov 23, 2024 | Team Udayavani |

ಮುಂಬಯಿ: ಮಹಾರಾಷ್ಟ್ರದ ಲೋಕಸಭಾ ಉಪಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು ಬಿಜೆಪಿಯು ಕಾಂಗ್ರೆಸ್‌ನಿಂದ ಒಂದು ಸ್ಥಾನವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಆಗಸ್ಟ್ 26 ರಂದು ಕಾಂಗ್ರೆಸ್ ಸಂಸದ ವಸಂತರಾವ್ ಚವಾಣ್ ನಿಧನದಿಂದ ನಾಂದೇಡ್ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿತ್ತು. ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ.ಸಂತುಕ್ ರಾವ್ ಮರೋತ್ ರಾವ್ ಹಂಬರ್ಡೆ ಅವರು ಕಾಂಗ್ರೆಸ್‌ನ ಪ್ರತಿಸ್ಪರ್ಧಿ ರವೀಂದ್ರ ಚವಾಣ್‌ ವಿರುದ್ಧ ಜಯ ಸಾಧಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ನಾಂದೇಡ್ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, 543 ಸದಸ್ಯ ಬಲದ ಲೋಕಸಭೆಯಲ್ಲಿ ಕೇಸರಿ ಪಕ್ಷದ ಸಂಖ್ಯೆ 241 ಕ್ಕೆ ಏರಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಪಕ್ಷದ ನಾಯಕ ರಾಹುಲ್ ಗಾಂಧಿ ರಾಯ್ ಬರೇಲಿ ಮತ್ತು ವಯನಾಡ್ ನಿಂದ ಗೆದ್ದಿದ್ದರು.ವಯನಾಡ್ ಸ್ಥಾನವನ್ನು ತೆರವು ಮಾಡಿದ್ದರು. ವಯನಾಡ್ ಗೆದ್ದು ನಾಂದೇಡ್ ಸೋತ ನಂತರ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 98ಕ್ಕೆ ಕುಸಿದಿದೆ.

ರಾಜ್ಯ ಸಭೆಯಲ್ಲಿ ಬಹುಮತದತ್ತ ಚಿತ್ತ

Advertisement

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಪ್ರಚಂಡ ವಿಜಯವು ರಾಜ್ಯಸಭೆಯಲ್ಲಿ ಅದರ ಭವಿಷ್ಯಕ್ಕೆ ಸಹಕಾರಿ ಎಂಬಂತೆ, ಮೇಲ್ಮನೆಯಲ್ಲಿ ಬಹುಮತವನ್ನು ಪಡೆಯಲು ಸಹಾಯ ಮಾಡಲಿದೆ. ಮಹಾರಾಷ್ಟ್ರ 19 ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುತ್ತದೆ.

ಪ್ರಸ್ತುತ, ಮೇಲ್ಮನೆಯಲ್ಲಿ ಬಿಜೆಪಿ ಏಳು ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್ ಮೂರು, ಶಿವಸೇನೆ (ಯುಬಿಟಿ) ಎರಡು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮೂರು, ಎನ್‌ಸಿಪಿ (ಶರದ್ ಪವಾರ್) ಎರಡು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಒಬ್ಬರು ಸದಸ್ಯರಾಗಿದ್ದಾರೆ.

ರಾಜ್ಯಸಭೆಯಲ್ಲಿ ಬಿಜೆಪಿ 95 ಸಂಸದರನ್ನು ಹೊಂದಿದ್ದು, ಇದರೊಂದಿಗೆ ಮೈತ್ರಿಕೂಟ ಸಂಸದರ ಸಂಖ್ಯೆ 112ಕ್ಕೆ ಏರಿದೆ. ಅಲ್ಲದೆ, ಆಡಳಿತ ಪಕ್ಷವನ್ನು ಬೆಂಬಲಿಸುವ ಆರು ನಾಮನಿರ್ದೇಶಿತ ಸದಸ್ಯರಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಪ್ರತಿನಿಧಿಸುವ ಅತಿ ಹೆಚ್ಚು ಸಂಸದರು ಉತ್ತರ ಪ್ರದೇಶ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.

ಮಹಾರಾಷ್ಟ್ರದಿಂದ ಯಾವುದೇ ತತ್ ಕ್ಷಣದ ಸ್ಥಾನಗಳು ಖಾಲಿಯಿಲ್ಲದಿದ್ದರೂ, ಮೇಲ್ಮನೆಯು ವಿವಿಧ ರಾಜ್ಯಗಳಿಂದ 10 ಖಾಲಿ ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ನಾಮನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳೂ ಖಾಲಿ ಇವೆ.245 ಸದಸ್ಯ ಬಲದ ಸದನದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಬಹುಮತವನ್ನು ದಾಟಲು ಸುಲಭವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next