ಹೊಸದಿಲ್ಲಿ,: ಪ್ರಧಾನಿ ಮೋದಿ ತಮ್ಮ ಐದು ದಿನಗಳ ಮೂರು ದೇಶಗಳ ಪ್ರವಾಸದ ಅವಧಿಯಲ್ಲಿ ಒಟ್ಟು 31 ದ್ವಿಪಕ್ಷೀಯ ಮಾತುಕತೆ, ಸಮಾಲೋಚನೆಗಳನ್ನು ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮೂರು ದೇಶಗಳ ಹಲವು ನಾಯಕರನ್ನು ಭೇಟಿಯಾಗಿದ್ದಾರಲ್ಲದೆ, ಜಿ20 ಶೃಂಗದ ವೇಳೆ 10 ದ್ವಿಪಕ್ಷೀಯ ಮಾತು ಕತೆ ನಡೆಸಿದ್ದಾರೆ. ಇದಲ್ಲದೆ ಇತರ ಔಪಚಾರಿಕ ಸಂವಾದಗಳಲ್ಲೂ ಭಾಗಿಯಾಗಿದ್ದಾರೆ.
ಬ್ರೆಜಿಲ್ನಲ್ಲಿ ಇಂಡೋನೇಷ್ಯಾ, ಪೋರ್ಚುಗಲ್, ಇಟೆಲಿ, ನಾರ್ವೆ, ಫ್ರಾನ್ಸ್, ಯು.ಕೆ., ಚಿಲಿ, ಆರ್ಜೆಂಟೀನಾ, ಆಸ್ಟ್ರೇಲಿಯಾಗಳ ಪ್ರಧಾನಿಗಳು, ಅಧ್ಯಕ್ಷರ ಜತೆಗೆ ಪ್ರಧಾನಿ ಮೋದಿಯವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಸಿಂಗಾಪುರ, ದಕ್ಷಿಣ ಕೊರಿಯಾ, ಈಜಿಪ್ಟ್, ಅಮೆರಿಕ ಮತ್ತು ಸ್ಪೇನ್ ಅಧ್ಯಕ್ಷರು ಮತ್ತು ಪ್ರಧಾನಿಗಳ ಜತೆಗೆ ನರೇಂದ್ರ ಮೋದಿ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಗಯಾನಾದಲ್ಲಿ ಡೊಮೆನಿಕಾ, ಬಹಾಮಾಸ್, ಟ್ರಿನಿಡಾಡ್ ಮತ್ತು ಟೊಬಾಗೋ, ಸುರಿನಾಮ್, ಬಾರ್ಬಡೋಸ್, ಆ್ಯಂಟಿಗುವಾ ಮತ್ತು ಬಾಬುವಾ, ಗ್ರೆನಾಡಾ ಮತ್ತು ಸೈಂಟ್ ಲೂಸಿಯಾದ ನಾಯಕರ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನು ಮೋದಿ ನಡೆಸಿದ್ದಾರೆ.
ಗಣ್ಯರಿಗೆ ಚನ್ನಪಟ್ಟಣದ ಗೊಂಬೆ ಉಡುಗೊರೆ
ಈ ವಿದೇಶ ಪ್ರವಾಸದ ವೇಳೆ ಪ್ರಧಾನಿ ಮೋದಿ ಚನ್ನಪಟ್ಟಣದ ಗೊಂಬೆಗಳನ್ನು ಗಣ್ಯರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಜತೆಗೆ ಮಹಾರಾಷ್ಟ್ರದಿಂದ 8, ಜಮ್ಮು -ಕಾಶ್ಮೀರದಿಂದ 5, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಲಡಾಖ್ನ ತಲಾ ಒಂದೊಂದು ಉಡುಗೊರೆಗಳನ್ನು ಪ್ರಧಾನಿ ನೀಡಿದ್ದಾರೆ.