ಜೈಪುರ್: ಉಪ ಚುನಾವಣೆ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಪಾಳಕ್ಕೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ನ.14) ರಾಜಸ್ಥಾನದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಭಾರೀ ಹೈಡ್ರಾಮಾದ ನಡುವೆಯೂ ಪೊಲೀಸರು ಬಂಧಿಸಿದ್ದಾರೆ.
ನರೇಶ್ ಮೀನಾ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಿದ್ದ ಸಂದರ್ಭದಲ್ಲಿ ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಬಳಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲುತೂರಾಟ ನಡೆಸಿದ್ದರು.
ಇಂದು ಬೆಳಗ್ಗೆ ಕೂಡಾ ಪೊಲೀಸರು ಮೀನಾ ಅವರನ್ನು ಕರೆದೊಯ್ಯದಂತೆ ತಡೆಯಲು ಬೆಂಬಲಿಗರು ರಸ್ತೆ ಮಧ್ಯೆ ಟಯರ್ಸ್ ಹಾಕಿ ಬೆಂಕಿಹಚ್ಚಿದ್ದರು. ನರೇಶ್ ಮೀನಾ ಅವರ ವಿರುದ್ಧ ಒಟ್ಟು 23 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಐದು ಪ್ರಕರಣಗಳು ಬಾಕಿ ಉಳಿದಿದೆ.
ಬುಧವಾರ ಸಂಜೆ ಚುನಾವಣ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿದ್ದ ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಅಮಿತ್ ಚೌಧರಿ ಅವರಿಗೆ ಮೀನಾ ಹಲ್ಲೆ ನಡೆಸಿದ ಘಟನೆ ನಂತರ ಗ್ರಾಮದಲ್ಲಿ ಮೀನಾ ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದಾಗ ಘರ್ಷಣೆ ತಲೆದೋರಿರುವುದಾಗಿ ತಿಳಿಸಿದೆ. ಅಮಿತ್ ಅವರ ಮೇಲೆ ಮೀನಾ ಹಲ್ಲೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.