Advertisement

ಅಡ್ಡ ಮತದಾನದ ಆತಂಕ; ರಾಜ್ಯಸಭೆ ಕಣದಲ್ಲುಳಿದ ರೆಡ್ಡಿ ,ಮನ್ಸೂರ್‌; ಫ‌ಲಿಸದ ಖರ್ಗೆ ಪ್ರಯತ್ನ

01:48 AM Jun 04, 2022 | Team Udayavani |

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ರಾಜ್ಯಸಭೆ ನಾಲ್ಕನೇ ಅಭ್ಯರ್ಥಿ ವಿಚಾರ, ಕಾಂಗ್ರೆಸ್‌-ಜೆಡಿಎಸ್‌ ನಡುವಿನ ತಿಕ್ಕಾಟಕ್ಕೆ ಕಾರಣವಾದರೆ, ಬಿಜೆಪಿಗೆ ಸಲೀಸಾಗಿ ಗೆಲ್ಲುವ ಅವಕಾಶ ಸೃಷ್ಟಿಸಿಕೊಟ್ಟಿದೆ.

Advertisement

ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ವಾಕ್ಸಮರದ ನಡುವೆಯೇ ನಾಮಪತ್ರ ಹಿಂಪಡೆಯುವ ಪ್ರಯತ್ನಗಳು ನಡೆದವು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನ 2ನೇ ಅಭ್ಯರ್ಥಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು. ಅತ್ತ ಮಾಜಿ ಪ್ರಧಾನಿ ದೇವೇಗೌಡರ ಒತ್ತಾಸೆಯಂತೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‌ ಮೂಲಕ ಮನ್ಸೂರ್‌ ಅಲಿ ಖಾನ್‌ ಅವರ ನಾಮಪತ್ರ ವಾಪಸ್‌ಗೆ ಪ್ರಯತ್ನಿಸಿದರು. ಅಲ್ಲದೆ, ದೇವೇಗೌಡರೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ವಾಪಸ್‌ ತೆಗೆದುಕೊಳ್ಳುತ್ತಾರೆ ಎಂದೇ ಭಾವಿಸಲಾಗಿತ್ತು.  ಮಧ್ಯಾಹ್ನ 3 ಗಂಟೆ ವರೆಗೂ ಕಾದರೂ ಪ್ರಯೋಜನವಾಗಿಲ್ಲ.

ನಾಲ್ಕನೇ ಸದಸ್ಯರ ಆಯ್ಕೆಯಲ್ಲಿ ಅಡ್ಡ ಮತ ದಾನದ ಸಂಭವವಿದೆ ಎಂಬುದು ಪಕ್ಷಗಳ ಆತಂಕ.  ಇದು  ಜೆಡಿಎಸ್‌ನಲ್ಲಿ ಸ್ವಲ್ಪ ಹೆಚ್ಚೇ ಇದೆ.  ಜೆಡಿಎಸ್‌ ಮತಗಳು ಕಾಂಗ್ರೆಸ್‌ನ ಎರಡನೇ ಹಾಗೂ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಬೀಳುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.

ವಿಪ್‌ ಜಾರಿ:  ಜೂ. 10ರಂದು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೇ ಮತ ಚಲಾಯಿಸಬೇಕು ಎಂದು ಕಾಂಗ್ರೆಸ್‌ ವಿಪ್‌ ಜಾರಿ ಮಾಡಿದೆ. ಮುಂದಿನ ನಡೆಯ ಬಗ್ಗೆ ಎಚ್‌. ಡಿ. ಕುಮಾರ ಸ್ವಾಮಿ ಸಿಂಗಾಪುರದಿಂದ ಮರಳಿದ ಬಳಿಕ ಚರ್ಚಿಸಲು ಜೆಡಿಎಸ್‌ ತೀರ್ಮಾನಿಸಿದೆ. ಈ ಮಧ್ಯೆ ಲೆಹರ್‌ ಸಿಂಗ್‌ ಜತೆ  ಸಿದ್ದರಾಮಯ್ಯ ಡೀಲ್‌ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.

ಗೆಲ್ಲುವ ವಿಶ್ವಾಸ ಇದೆ: ಗೆಲ್ಲುವ ವಿಶ್ವಾಸದಿಂದಲೇ ಎರಡನೇ ಅಭ್ಯರ್ಥಿ ಯನ್ನು  ಕಣಕ್ಕಿಳಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರೆ, ನಾವು ಗೆಲ್ಲು ತ್ತೇವೆ, ನೋಡುತ್ತಾ ಇರಿ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹೇಳಿದ್ದಾರೆ.  ಗೆಲುವಿಗೆ  ಏನು ಮಾಡುತ್ತೇವೆ ಎಂದು ಈಗೇನು ಹೇಳುವು ದಿಲ್ಲ. ಆದರೆ ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು  ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್‌ ಸುರಾನಾ ಹೇಳಿದ್ದಾರೆ.

Advertisement

ಮೂರು ಪಕ್ಷಗಳ ನಿಲುವೇನು?
ಬಿಜೆಪಿ
ಕಾಂಗ್ರೆಸ್‌-ಜೆಡಿಎಸ್‌ಗಿಂತ ಹೆಚ್ಚಿನ ಮತಗಳು ನಮ್ಮ ಬಳಿ ಇವೆ. ಎರಡೂ ಪಕ್ಷಗಳಲ್ಲಿ ನಮಗೆ ಸ್ನೇಹಿತರಿದ್ದಾರೆ. ನಾವೇ ಗೆಲ್ಲುತ್ತೇವೆ.

ಕಾಂಗ್ರೆಸ್‌
ಹಿಂದೆ ದೇವೇಗೌಡರು ಸೇರಿ ಇಬ್ಬರಿಗೆ ಬೆಂಬಲ ಕೊಟ್ಟಿದ್ದೆವು. ಈಗ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು,  ನಮಗೆ ಬೆಂಬಲ ನೀಡಿ  ಜಾತ್ಯತೀತ ಬದ್ಧತೆ ಸಾರಲಿ, ಇಲ್ಲವೇ ನಾವು ಆತ್ಮಸಾಕ್ಷಿ ಮತ ಕೇಳುತ್ತೇವೆ.

ಜೆಡಿಎಸ್‌
ಕೋಮು ವಾದಿ ಪಕ್ಷ ಬಿಜೆಪಿ ದೂರ ಇಡಲು ಕಾಂಗ್ರೆಸ್‌ ನಮ್ಮನ್ನೇ ಬೆಂಬಲಿಸಲಿ. ನಮಗೂ ಗೆಲ್ಲುವ ವಿಶ್ವಾಸವಿದೆ.

ಲೆಕ್ಕಾಚಾರ
ಬಿಜೆಪಿ: ಸಂಖ್ಯಾಬಲ 122 ಮತ, ಒಬ್ಬರಿಗೆ 45 ಎಂದರೆ ಇಬ್ಬರಿಗೆ 90. ಉಳಿದ 32 ಮತ 3ನೇ ಅಭ್ಯರ್ಥಿಗೆ, ಜತೆಗೆ 2ನೇ ಪ್ರಾಶಸ್ತ್ಯ ಮತ. ಬಿಜೆಪಿ ಪರ ಒಲವು ಹೊಂದಿರುವ ವಿಪಕ್ಷ ಶಾಸಕರ ಮತಗಳ ಮೇಲೆ ಕಣ್ಣು.

ಕಾಂಗ್ರೆಸ್‌: ಸಂಖ್ಯಾಬಲ 71 ಮತ. ಒಬ್ಬರಿಗೆ 45. ಉಳಿದ ಮತ 26, ಎರಡನೇ ಅಭ್ಯರ್ಥಿಗೆ ಜತೆಗೆ ಎರಡನೇ ಪ್ರಾಶಸ್ತ್ಯ ಮತ. ಕಾಂಗ್ರೆಸ್‌ ಸೇರಲು ಬಯಸಿರುವ ಜೆಡಿಎಸ್‌ ಮತಗಳ ಮೇಲೆ ನಂಬಿಕೆ.

ಜೆಡಿಎಸ್‌: ಸಂಖ್ಯಾಬಲ 32. ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು  13 ಮತಗಳ ಕೊರತೆ ಇದೆ. ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಅಡ್ಡ ಮತ ಬಿದ್ದರಷ್ಟೇ ಗೆಲುವು ಸಾಧ್ಯ.

(ಒಬ್ಬರಿಗೆ ಗೆಲ್ಲಲು 45 ಮೊದಲ ಪ್ರಾಶಸ್ತ್ಯ ಮತ ಸಾಕು. ಸಾಮಾನ್ಯವಾಗಿ ಎರಡು-ಮೂರು ಮತ ಹೆಚ್ಚಾಗಿಯೇ ಹಂಚಿಕೆ ಮಾಡಲಾಗುತ್ತದೆ. ಆದರೆ  ಈ ಚುನಾವಣೆಯಲ್ಲಿ  ಪ್ರತಿ ಮತವೂ ಅಮೂಲ್ಯವಾದ್ದರಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಿ 45 ಮತ ಹಂಚಿಕೆ ಮಾಡಬಹುದು)

Advertisement

Udayavani is now on Telegram. Click here to join our channel and stay updated with the latest news.

Next