ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ನ.17ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯಾದ್ಯಂತ ಮುಂದಿನ ವಾರದವರೆಗೆ ಸಂಜೆ ವೇಳೆ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಕೆಲವು ಕಡೆಗಳಲ್ಲಿ ಬೆಳಗ್ಗೆ ಮಂಜಿನಿಂದ ಕೂಡಿದ ವಾತಾವರಣ ಇರಲಿದೆ.
ಗರಿಷ್ಠ 28 ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿ ಮಳೆ: ಮಂಗಳವಾರ ಕರಾವಳಿಯ ಒಂದೆರಡು ಕಡೆ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದಿದೆ. ಪಣಂಬೂರಿನಲ್ಲಿ 4 ಸೆಂ.ಮೀ, ಬೆಂ.ದೇವನಹಳ್ಳಿ 3 ಸೆಂ.ಮೀ., ದ.ಕನ್ನಡದ ಬೆಳ್ತಂಗಡಿ, ಧರ್ಮಸ್ಥಳ, ಉಡುಪಿಯ ಬ್ರಹ್ಮಾವರ, ಚಿಂತಾಮಣಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ದ.ಕನ್ನಡದ ಪುತ್ತೂರು, ಉಡುಪಿಯ ಕಾರ್ಕಳ, ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣ ದೊಡ್ಡಬಳ್ಳಾಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.