Advertisement

Kambala: ಕ್ರೀಡಾ ಇಲಾಖೆ ಮಾನ್ಯತೆಯ ನಿರೀಕ್ಷೆಯಲ್ಲಿ ಕರಾವಳಿ “ಕಂಬಳ’

01:22 AM Dec 10, 2024 | Team Udayavani |

ಮಂಗಳೂರು: ಕರಾವಳಿಯ ಜನಪ್ರಿಯ ಹಾಗೂ ಸಾಹಸ ಕ್ರೀಡೆ ಕಂಬಳವನ್ನು ಶಿಸ್ತುಬದ್ಧವಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನವಾಗುವಂತೆ ಕೈಗೊಳ್ಳಲು “ಕಂಬಳ ರಾಜ್ಯ ಅಸೋಸಿಯೇಶನ್‌’ ರಚಿಸಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ಮಾನ್ಯತೆ ಪಡೆಯುವ ಪ್ರಕ್ರಿಯೆಗೆ ರಾಜ್ಯ ಸರಕಾರ ಹಸುರು ನಿಶಾನೆ ತೋರಿಸಿದೆ.

Advertisement

ಈ ಸಂಬಂಧ ಅಂತಿಮ ಒಪ್ಪಿಗೆಯನ್ನು ನಿರೀಕ್ಷಿಸಲಾಗುತ್ತಿದ್ದು, ಕಂಬಳ ಜಿಲ್ಲಾ ಸಮಿತಿಯು ವಿಶೇಷ ಮಹಾಸಭೆ ಕರೆದು ಚರ್ಚಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ವರದಿಯಲ್ಲಿ ತಿಳಿಸಿದೆ. ಜತೆಗೆ ಸಮಿತಿಯ ಮುಂದಿನ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆಯನ್ನೂ ನಡೆಸುವುದಾಗಿ ತಿಳಿಸಿದೆ.

ಕಂಬಳಕ್ಕೆ ಇನ್ನಷ್ಟು ಶಕ್ತಿ ತುಂಬಿ ಕ್ರೀಡೆಯ ಮನ್ನಣೆ ನೀಡುವುದು, ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಸರಕಾರವು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ ಪಡೆದು ರಾಜ್ಯ ಕಂಬಳ ಅಸೋಸಿಯೇಶನ್‌ ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಸಹಕಾರ ಸಂಘಗಳ ಉಪನಿಬಂಧಕರಡಿ ಕಂಬಳ ರಾಜ್ಯ ಅಸೋಸಿಯೇಶನ್‌ ನೋಂದಣಿ ಮಾಡಲಾಗಿದೆ. ಇದಲ್ಲದೆ ರಾಷ್ಟ್ರೀಯ ಕ್ರೀಡಾ ಇಲಾಖೆ ಮಾನ್ಯತೆ ಪಡೆಯಲು ರಾಷ್ಟ್ರೀಯ ಕಂಬಳ ಫೆಡರೇಶನ್‌ ನೋಂದಣಿ ಮಾಡುವ ಪ್ರಯತ್ನವೂ ಚಾಲ್ತಿಯಲ್ಲಿದೆ.

ರಾಜ್ಯ ಕಂಬಳ ಸಮಿತಿಯು ಒಂದು ವರ್ಷದ ಲೆಕ್ಕಪತ್ರ ವರದಿ ಮಂಡಿಸಿದ್ದು, ಸರ್ವಾನುಮತದಿಂದ ಆಯ್ಕೆ ಮಾಡಿದ ಪದಾಧಿಕಾರಿಗಳ ಪಟ್ಟಿ, ಬೈಲಾ ಪ್ರತಿಯನ್ನೂ ಸಲ್ಲಿಸಲಾಗಿದೆ. ಇದರ ಪರಾಮರ್ಶೆ ಬಳಿಕ ಕ್ರೀಡಾ ಇಲಾಖೆಯಿಂದ ಮಾನ್ಯತೆ ದೊರಕುವ ನಿರೀಕ್ಷೆಯಲ್ಲಿದೆ.

ಶೀಘ್ರ ಮಾನ್ಯತೆ ನಿರೀಕ್ಷೆ
ಐತಿಹಾಸಿಕ ನೆಲೆ ಹಾಗೂ ಪಾರಂಪರಿಕ ವೈಶಿಷ್ಟéಗಳನ್ನು ಹೊಂದಿರುವ ಕಂಬಳ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್‌ ರಚಿಸಲಾಗಿದೆ. ಇದಕ್ಕೆ ರಾಜ್ಯ ಕ್ರೀಡಾ ಇಲಾಖೆಯಿಂದ ಮಾನ್ಯತೆ ನೀಡುವಂತೆ ಸರಕಾರ ಶಿಫಾರಸು ಮಾಡಿದೆ. ಇದರ ಅನುಮೋದನೆ ಪ್ರಕ್ರಿಯೆಗಳು ಈಗ ಚಾಲ್ತಿಯಲ್ಲಿದ್ದು, ಶೀಘ್ರವೇ ಮಾನ್ಯತೆ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ.

Advertisement

ಲಾಭವೇನು?
“ಕಂಬಳ ರಾಜ್ಯ ಅಸೋಸಿಯೇಶನ್‌’ಗೆ ಸರಕಾರದ ಮಾನ್ಯತೆ ದೊರಕಿದ ಬಳಿಕ ಕಂಬಳಕ್ಕೆ ಸರಕಾರದಿಂದ ವಿಶೇಷ ಪ್ರೋತ್ಸಾಹ, ಅನುದಾನ ದೊರಕಬಹುದು. ಪ್ರವಾಸೋದ್ಯಮ ಹಾಗೂ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಇನ್ನಷ್ಟು ವೈಭವದಿಂದ ಉತ್ಸವಗಳನ್ನು ಹಮ್ಮಿಕೊಳ್ಳಬಹುದು. ರಾಜ್ಯ ಮಟ್ಟದ ಪ್ರಶಸ್ತಿ ನೀಡುವ ಸಂದರ್ಭ ಕಂಬಳದ ಕೋಣ ಓಡಿಸುವವರನ್ನೂ ಕ್ರೀಡಾಳುಗಳಂತೆ ಪರಿಗಣಿಸುವಂತೆ ಮಾಡುವ ಉದ್ದೇಶವಿದೆ.

ಅಸೋಸಿಯೇಶನ್‌ಗೆ ಕ್ರೀಡಾ ಇಲಾಖೆ ಮಾನ್ಯತೆ ದೊರಕಿದ ಬಳಿಕ ಎಲ್ಲ ಜಿಲ್ಲಾ ಹಾಗೂ ಸ್ಥಳೀಯ ಕಂಬಳ ಸಮಿತಿಗಳನ್ನು ರಾಜ್ಯಮಟ್ಟದ ಅಸೋಸಿಯೇಶನ್‌ನಲ್ಲಿ ನೋಂದಾಯಿಸಿ ಪ್ರತ್ಯೇಕ ಬೈಲಾ ರಚಿಸಿ ಸ್ಥಳೀಯ ಕಂಬಳ ಸಮಿತಿಗಳಿಗೆ ಹಣ ಬಿಡುಗಡೆ ಮಾಡಬಹುದು ಎಂಬ ಲೆಕ್ಕಾಚಾರವೂ ಇದೆ.

-ಕಂಬಳಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ.
-ಅನಾದಿ ಕಾಲದ ಸಂಪ್ರದಾಯ ಕಂಬಳ (ದೈವಾರಾಧನೆಯೊಂದಿಗೆ) ಆಧುನಿಕ ಕಂಬಳ ಹಾಗೂ ಒಂಟಿ ಕೆರೆ ಕಂಬಳಗಳು ನಡೆಯುತ್ತಿವೆ.
-ಜಿಲ್ಲೆಯಲ್ಲಿ ಸುಮಾರು 300 ಜತೆ ಓಟದ ಕೋಣಗಳಿವೆ.
-ತರಬೇತಿ ಪಡೆದ 150 ಯುವ ಓಟಗಾರರಿದ್ದಾರೆ.
-ಸುಮಾರು 500ಕ್ಕೂ ಅಧಿಕ ಮಂದಿ ಕೋಣಗಳ ಸೇವೆ ಹಾಗೂ ಕಂಬಳದಲ್ಲಿ ದುಡಿಯುವ ವರ್ಗವಿದೆ.
-ಸುಮಾರು 25 ಜೋಡುಕೆರೆ ಕಂಬಳ ನಡೆಯುತ್ತಿದೆ.
-ಒಂದು ಕಂಬಳಕ್ಕೆ 30ರಿಂದ 40 ಲಕ್ಷ ರೂ. ಖರ್ಚು ಇದೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next