Advertisement

Mangaluru: ಮಳೆ-ಬಿಸಿಲು-ಚಳಿ: ಸಾಂಕ್ರಾಮಿಕ ರೋಗದ ಭೀತಿ

01:47 AM Dec 11, 2024 | Team Udayavani |

ಮಂಗಳೂರು: ಕೆಲವು ದಿನಗಳಿಂದ ಹವಾಮಾನ ಬದಲಾಗುತ್ತಿದ್ದು, ಬಿಸಿಲು-ಸೆಕೆ ಮತ್ತು ಕೆಲವೊಮ್ಮೆ ಮಳೆಯಿಂದ ಕೂಡಿದ ವಾತಾವರಣ ಇದೆ. ಇದು ಶೀತ, ಜ್ವರ ಸಹಿತ ವಿವಿಧ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ ಕೆಲವು ದಿನಗಳಿಂದ ಮಕ್ಕಳು ಸಹಿತ ಸಾರ್ವಜನಿಕರಲ್ಲಿ ವೈರಲ್‌ ಫೀವರ್‌ ಹೆಚ್ಚಾಗುತ್ತಿದ್ದು, ವೈದ್ಯರ ಬಳಿ ತೆರಳುವವರ ಸಂಖ್ಯೆಯೂ ಏರಿಕೆಯಾಗಿದೆ.

Advertisement

ಜ್ವರ ಸಹಿತ ಸಾಂಕ್ರಾಮಿಕ ರೋಗ ಮಕ್ಕಳಲ್ಲಿ ಕಂಡುಬಂದರೆ ಅವರನ್ನು ಶಾಲೆಗೆ ಕಳುಹಿಸದೇ ಇರುವುದು ಉತ್ತಮ. ಹಾಗೆ ಮಾಡುವುದರಿಂದ ಬೇರೆ ಮಕ್ಕಳಿಗೆ ಹರಡುವುದು ತಪ್ಪುತ್ತದೆ.

ಚಳಿಗಾಲ ಆರಂಭವಾಗುತ್ತಿರುವ ಕಾರಣ ಚರ್ಮದಲ್ಲಿ ಉಷ್ಣಗುಳ್ಳೆ, ತುರಿಕೆ, ಚರ್ಮ ಬಿರುಕು ಮುಂತಾದ ಚರ್ಮಕ್ಕೆ ಸಂಬಂಧಿಸಿದ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಇದೇ ಕಾರಣಕ್ಕೆ ಚರ್ಮದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಕೆಲವು ದಿನಗಳಿಂದ ಮಕ್ಕಳಲ್ಲಿ ಕಾಲು ಬಾಯಿ ರೋಗ (ಹ್ಯಾಂಡ್‌ ಫೂಟ್‌ ಆ್ಯಂಡ್‌ ಮೌತ್‌ ಡಿಸೀಸ್‌) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸುಮಾರು 5ರಿಂದ 10 ವರ್ಷದ ಮಕ್ಕಳಲ್ಲಿ ಈ ರೋಗ ಕಂಡುಬರುತ್ತಿದ್ದು, ಇದು ಸಾಂಕ್ರಾಮಿಕ ರೋಗವಾಗಿದೆ. ಶಾಲೆಗಳಲ್ಲಿ ಮಕ್ಕಳಲ್ಲಿ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆ ಇರುವ ಕಾರಣ ಹೆಚ್ಚಿದೆ.

ಜಿಲ್ಲೆಯಲ್ಲಿ ಆಗಾಗ್ಗೆ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಮತ್ತೆ ಡೆಂಗ್ಯೂ ಭೀತಿ ಎದುರಾಗಿದೆ. ಭಾರೀ ಮಳೆಯ ಕಾರಣ ನೀರು ಹರಿದುಹೋಗುತ್ತದೆ. ಇದರಿಂದಾಗಿ ಡೆಂಗ್ಯೂ ಪ್ರಕರಣ ತುಸು ಕಡಿಮೆ ಇತ್ತು. ಈಗ ನಿಂತ ಸ್ವತ್ಛ ನೀರಿನಲ್ಲಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿದೆ.

Advertisement

ಮುನ್ನೆಚ್ಚರಿಕೆ ಅಗತ್ಯ
-ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ
-ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ
-ಕುಡಿಯಲು ಕುದಿಸಿ ಆರಿಸಿದ ನೀರನ್ನು ಉಪಯೋಗಿಸಿ
-ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ
– ಜ್ವರ ಸಹಿತ ರೋಗ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ
– ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ ಸೇವಿಸಬೇಡಿ
– ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ಬಂದರೆ ಶಾಲೆಗೆ ಕಳುಹಿಸದಿರುವುದು ಉತ್ತಮ

ಕೆಲವು ದಿನಗಳಿಂದ ಹವಾಮಾನ ಬದಲಾವಣೆಯಾಗುತ್ತಿದ್ದು, ಕೆಲವು ರೋಗ ಗಳು ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಆರೋಗ್ಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದಲೂ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಯಾವುದೇ ಕಾಯಿಲೆಗೆ ತುತ್ತಾದರೆ ಮೆಡಿಕಲ್‌ಗ‌ಳಿಂದ ಔಷಧ ತೆಗೆದುಕೊಳ್ಳದೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.
ಡಾ| ಎಚ್‌.ಆರ್‌. ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next