Advertisement

Mangaluru: ಫೈಂಜಾಲ್‌ ಮಳೆ ಅಬ್ಬರ; ನಗರದ ಹಲವೆಡೆ ಅವಾಂತರ

04:09 PM Dec 04, 2024 | Team Udayavani |

ಮಹಾನಗರ: ಫೈಂಜಾಲ್‌ ಚಂಡ ಮಾರುತ ಪರಿಣಾಮ ಸುರಿದ ಮಳೆ ಮಂಗಳೂರು ನಗರದಲ್ಲೆಡೆ ಭಾರೀ ಅವಾಂತರ ಸೃಷ್ಟಿಸಿದ್ದು, ಸಾಕಷ್ಟು ಆಸ್ತಿ- ಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಸೋಮವಾರ ತಡರಾತ್ರಿಯಿಂದ ಮಂಗಳವಾರ ಮುಂಜಾನೆ ವರೆಗೆ ಸುರಿದ ನಿರಂತರ ಮಳೆಯಾಗಿ ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ರುವ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ಆವರಣ ಗೋಡೆ ಜರಿದು ಬಿದ್ದು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಸೋಮವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಗೆ ಹೊಟೇಲ್‌, ಅಂಗಡಿಗಳಿಗೆ ನುಗ್ಗಿದ ನೀರನ್ನು ತೆರವುಗೊಳಿಸುವ ಕಾರ್ಯವೂ ಕೆಲವೆಡೆ ನಡೆಯಿತು. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಪೂ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಬೆಳಗ್ಗಿನ ವೇಳೆ ನಗರದಲ್ಲಿ ಎಂದಿನ ದಟ್ಟಣೆ ಇರಲಿಲ್ಲ. ಜಲ ಸಿರಿ, ಗೇಲ್‌ ಗ್ಯಾಸ್‌ ಲೈನ್‌, ಒಳಚರಂಡಿ ಸಹಿತ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಕಾಂಕ್ರೀಟ್‌ ರಸ್ತೆಯನ್ನು ತುಂಡರಿಸಿ, ಕಾಮಗಾರಿ ನಡೆಸಿ ಗುಂಡಿಗೆ ತುಂಬಿಸಿದ್ದ ಮಣ್ಣು ರಸ್ತೆಗೆ ಬಂದಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡಿತು. ಅಲ್ಲಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯೂ ಸ್ಥಳೀಯರಿಗೆ, ವಾಹನ ಸವಾರರಿಗೆ ಸಮಸ್ಯೆಯ ಕೂಪವಾಗಿ ಪರಿಣಮಿಸಿತು.ಕೊಡಿಯಾಲಬೈಲಿನ ಟಿಎಂಎ ಪೈ ಸಭಾಂಗಣದ ಹಿಂಭಾಗದ ಪ್ರದೇಶ, ಭಗವತಿ ನಗರ ರಸ್ತೆ, ಕೊಡಿಯಾಲಗುತ್ತು ರಸ್ತೆ ಸೇರಿದಂತೆ ಹಲವೆಡೆ ತಗ್ಗು ಪ್ರದೇಶದಲ್ಲಿರುವ ಒಳ ರಸ್ತೆಗಳು ಬೆಳಗ್ಗೆ ಕೆಲವು ಹೊತ್ತು ಜಲಾವೃತಗೊಂಡಿತ್ತು. ಕೊಟ್ಟಾರ ಚೌಕಿ ಮುಖ್ಯ ರಸ್ತೆಯೂ ಮುಂಜಾನೆ ವೇಳೆ ಸುರಿದ ಮಳೆಗೆ ಮುಳುಗಿತು. ರಾಜಕಾಲುವೆಗಳು ತುಂಬಿ ಹರಿದು ಮಾಲೆಮಾರ್‌, ಕೊಟ್ಟಾರ ಚೌಕಿ ಭಾಗದಲ್ಲಿ ಹಲವು ಮನೆಗಳಿಗೂ ಮುಂಜಾನೆ ವೇಳೆ ನೀರು ನುಗ್ಗಿದೆ.
ಅಂಬೇಡ್ಕರ್‌ ವೃತ್ತದ ಬಳಿ ಬಸ್ಸು ತಂಗುದಾಣದ ಮುಂಭಾಗ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

Advertisement

ವಿವಿಧೆಡೆ ತಗ್ಗು ಪ್ರದೇಶದ ಪಾರ್ಕಿಂಗ್‌ ಪ್ರದೇಶದಲ್ಲಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳು ಕೂಡ ಜಲಾವೃತಗೊಂಡು ಹಾನಿಯಾಗಿದೆ. ವಾಹನ ಸ್ಟಾರ್ಟ್‌ ಆಗದೆ ಮಾಲೀಕರು ಸಮಸ್ಯೆಗೊಳಗಾದರು. ಡಿಸೆಂಬರ್‌ ತಿಂಗಳಲ್ಲಿ ಈ ರೀತಿ ಮಳೆ ಬಂದು ಹಾನಿ ಸಂಭವಿಸಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಮೇಯರ್‌ ಮನೋಜ್‌ ಕುಮಾರ್‌ ಅವರು ಅಧಿಕಾರಿಗಳೊಂದಿಗೆ ಕೊಟ್ಟಾರ ಚೌಕಿ, ಕೊಟ್ಟಾರ ಸೇರಿದಂತೆ ನಗರ ವಿವಿಧೆಡೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ತಡೆಗೋಡೆ ಜರಿದು ಮನೆ ಅಪಾಯದಲ್ಲಿ
ಕೊಡಿಯಾಲಗುತ್ತು ಬಳಿ ರಾಜಕಾಲುವೆಯ ತಡೆಗೋಡೆ ಜರಿದು ಉಮೇಶ ಶೇಟ್‌ ಅವ ರ ಮನೆಯ ಭಾಗಶಃ ಅಂಗಳ ಸಹಿತ ಆವರಣ ಗೋಡೆ ಕಾಲುವೆ ಪಾಲಾಗಿದೆ. ಮನೆಯ ಪಂಚಾಂಗದ ಪಿಲ್ಲರ್‌ಗಳು ಕಾಣಿಸುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಇನ್ನೊಂದು ಕಡೆಯಲ್ಲಿ ಹಳೆ ಮನೆಯೊಂದರ ಬಳಿ ಆವರಣಗೋಡೆ ಸಹಿತ ತಡೆಗೋಡೆ ಜರಿದು ಬಿದ್ದಿದೆ. ಹಳೆ ಮನೆಯಲ್ಲಿ ಯಾರೂ ವಾಸವಾಗಿರಲ್ಲ. ವಾರ್ಡ್‌ನ ಐದಾರು ಕಡೆಯಲ್ಲಿ ನೀರಿನ ರಭಸಕ್ಕೆ ರಾಜಕಾಲುವೆ ತಡೆಗೋಡೆ ಜರಿದು ಹಾನಿಯಾಗಿದೆ. ಸ್ಥಳಕ್ಕೆ ಮನಪಾ ಸದಸ್ಯ, ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೃದ್ಧೆಯ ಸ್ಥಳಾಂತರ
ಫಳ್ನೀರ್‌ನ ಮಥಾಯಿಸ್‌ ಕಾಂಪೌಂಡ್‌ ಬಳಿಯ ಒಂಟಿ ವೃದ್ಧೆಯೊಬ್ಬರು ವಾಸವಾಗಿದ್ದ ಮನೆಯ ಆವರಣ ಗೋಡೆ ಜರಿದು ಬಿದ್ದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿ ಭೇಟಿ ನೀಡಿ, ಮಹಿಳೆಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಿದ್ದಾರೆ. ಬೋಳೂರು ವಾರ್ಡ್‌ನಲ್ಲಿಯೂ ಹಲವು ಮನೆಗಳಿಗೆ ನೀರು ನುಗ್ಗಿದ್ದು, 1-2 ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. ಸ್ಥಳೀಯ ಕಾರ್ಪೋರೆಟರ್‌ ಜಗದೀಶ್‌ ಶೆಟ್ಟಿ ಅವರು ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಗಳಿಗೆ ನುಗ್ಗಿದ ನೀರು
-ಬಿಜೈನ ಗ್ರೀನ್‌ ಎಕರ್ ಬಳಿಯ ಹಿಲ್ಡಾ ಅವರ ಮನೆಗೆ ಮಳೆ ನೀರು ನುಗ್ಗಿದ್ದು, ಮನೆ ಕೆಸರು ಮಯವಾಗಿದೆ.
-ಮುಂಜಾನೆ 3.30ರ ವೇಳೆಗೆ ಕರಂಗಲಪಾಡಿಯ ಡಾ| ಶಿಕಾರಿಪುರ ಕೃಷ್ಣ ಮೂರ್ತಿ ಅವರ ಮನೆಯ ಮುಂಭಾಗ ಮತ್ತು ಹಿಂಭಾಗದ ಕಾಂಪೌಂಡ್‌ ಒಡೆದು ಕೆಸರು ನೀರು ಮನೆಗೆ ನುಗ್ಗಿದೆ.
-ಜಪ್ಪು ವಾರ್ಡ್‌ನ ಎಂ.ಆರ್‌. ಭಟ್‌ ಲೇನ್‌ನ ಸುರಕ್ಷಾ ಹಾಸ್ಟೆಲ್‌ ಬಳಿಯ ಅಬ್ದುಲ್‌ ರೆಹ್ಮಾನ್‌ ಅವರ ಮನೆಯ ಆವರಣ ಗೋಡೆ ಕುಸಿದಿದೆ.
-ಕೊಟ್ಟಾರಚೌಕಿಯ ಸುಬ್ರಹ್ಮಣ್ಯಪುರ ಮೊದಲನೇ ಕ್ರಾಸ್‌ ರಸ್ತೆಯಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದೆ.

Advertisement

ಸುರತ್ಕಲ್‌: ಕಾಂಪೌಂಡು ಕುಸಿತ
ಸುರತ್ಕಲ್‌: ಸುರತ್ಕಲ್‌ನಲ್ಲಿ ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆಯಾದರೂ ಮಧ್ಯಾಹ್ನದ ವೇಳೆಗೆ ಮಳೆಯ ಆರ್ಭಟ ಕಡಿಮೆಯಾಗಿ ಜನರು ನಿಟ್ಟುಸಿರು ಬಿಡುವಂತಾಯಿತು.

ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಸುರತ್ಕಲ್‌ ಬಳಿ ಚರ್ಚ್‌ ಹಾಗೂ ಸರಕಾರಿ ನರ್ಸ್‌ ಕ್ವಾಟ್ರಸ್‌ ಬಳಿ ಕಾಂಪೌಂಡ್‌ ಕುಸಿತವಾಗಿದೆ. ಸುರತ್ಕಲ್‌ ರೈಲ್ವೇ ಮೇಲ್ಸೇತುವೆ, ಹೆದ್ದಾರಿ 66ರ ಹೊಸಬೆಟ್ಟು ಮತ್ತಿತರೆಡೆ ಮಳೆ ನೀರು ನಿಂತು ಸಂಚಾರಕ್ಕೆ, ಪಾದಚಾರಿಗಳಿಗೆ ಅಡಚಣೆಯಾಯಿತು. ಮಳೆಯಿಂದಾಗಿ ಕೆಸರು ನೀರು, ಕಸ ಕಡ್ಡಿಗಳು ರಸ್ತೆಯ ಮೇಲೇಯೆ ಹರಿದು ಬಂತು. ಸ್ಥಳೀಯರು ಹಾಗೂ ಪಾಲಿಕೆ ಸಿಬಂದಿ ಸ್ಪಂದಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿದ್ಯುತ್‌ ವೈಫಲ್ಯವಾದ ಕಡೆಗಳಲ್ಲಿ ದುರಸ್ತಿ ಕಾರ್ಯ ಪುನರಾರಂಭಗೊಂಡಿದೆ.

ಅಂಬೇಡ್ಕರ್‌ ವೃತ್ತದ ಬಳಿ ಬಸ್ಸು ತಂಗುದಾಣದ ಮುಂಭಾಗ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

ವಿವಿಧೆಡೆ ತಗ್ಗು ಪ್ರದೇಶದ ಪಾರ್ಕಿಂಗ್‌ ಪ್ರದೇಶದಲ್ಲಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳು ಕೂಡ ಜಲಾವೃತಗೊಂಡು ಹಾನಿಯಾಗಿದೆ. ವಾಹನ ಸ್ಟಾರ್ಟ್‌ ಆಗದೆ ಮಾಲಕರು ಸಮಸ್ಯೆಗೊಳಗಾದರು. ಡಿಸೆಂಬರ್‌ ತಿಂಗಳಲ್ಲಿ ಈ ರೀತಿ ಮಳೆ ಬಂದು ಹಾನಿ ಸಂಭವಿಸಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಮೇಯರ್‌ ಮನೋಜ್‌ ಕುಮಾರ್‌ ಅವರು ಅಧಿಕಾರಿಗಳೊಂದಿಗೆ ಕೊಟ್ಟಾರ ಚೌಕಿ, ಕೊಟ್ಟಾರ ಸೇರಿದಂತೆ ನಗರ ವಿವಿಧೆಡೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಚರಂಡಿಗಳಲ್ಲಿ ತುಂಬಿದ್ದ ಕಸ ಕಡ್ಡಿ: ನೀರು ಹರಿಯಲು ಅಡ್ಡಿ
ನೀರು ಹರಿದು ಹೋಗಬೇಕಾದ ಚರಂಡಿಗಳಲ್ಲಿ ತರಗೆಲೆ, ಕಸ ಕಡ್ಡಿಗಳು ತುಂಬಿದ್ದ ಪರಿಣಾಮ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಗೆ ಬಂದಿದೆ. ಮಂಗಳವಾರ ಪಾಲಿಕೆ ಸ್ವತ್ಛತಾ ಸಿಬಂದಿ ಅಲ್ಲಲ್ಲಿ ಚರಂಡಿಗಳನ್ನು ಸ್ವತ್ಛಗೊಳಿಸಿ, ಕಸ ಕಡ್ಡಿಗಳನ್ನು ಮೇಲಕ್ಕೆ ಹಾಕಿದ್ದಾರೆ. ಅವುಗಳನ್ನು ಅಲ್ಲಿಂದ ತೆಗೆಯದಿದ್ದರೆ ಮತ್ತೆ ಚರಂಡಿ ಸೇರಿ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next