Advertisement

2019ರಲ್ಲಿ ರಾಹುಲ್‌ ಪ್ರಧಾನಿ: ಹೆಬ್ಬಾಳ್ಕರ್‌

09:56 AM Nov 13, 2017 | |

ಕಾವೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಅತ್ಯುತ್ತಮ ಆಡಳಿತ ನಡೆಸುತ್ತಿದ್ದು, ಮತದಾರರಿಗೆ ನೀಡಿದ ಭರವಸೆಯನ್ನು ಈಡೇರಿಸಿದೆ. 2018ರಲ್ಲೂ ಕಾಂಗ್ರೆಸ್‌ಗೆ ಜನತೆಯ ಆಶೀರ್ವಾದ ಅಗತ್ಯವಿದೆ ಹಾಗೂ 2019ರಲ್ಲಿ ರಾಹುಲ್‌ ಗಾಂ ಧಿ ಪ್ರಧಾನಿಯಾಗಲಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ  ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

Advertisement

ಕಾವೂರಿನಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಜಂಟಿಯಾಗಿ
ಆಯೋಜಿಸಿದ್ದ ಸೌಹಾರ್ದ ಸಮಾವೇಶ ಮತ್ತು ವಿವಿಧ ಸವಲತ್ತುಗಳ ವಿತರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಜಾತ್ಯತೀತವಾಗಿದ್ದು, ಎಲ್ಲ ಸಮುದಾಯವನ್ನೂ ಸಮಾನವಾಗಿ ಪರಿಗಣಿಸುತ್ತದೆ. ಆದರೆ ಬಿಜೆಪಿಯು ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸೂಕ್ತ ಉತ್ತರವನ್ನು ಮತದಾರರು ಮಾತ್ರ ನೀಡಬಲ್ಲರು. ಮುಂದಿನ ಬಾರಿ ಕಾಂಗ್ರೆಸ್‌ ಅನ್ನು ಅಧಿ ಕಾರಕ್ಕೆ ತರುವ ಮೂಲಕ ರಾಜ್ಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾಗಲು ಮತದಾರರು ಸಹಕರಿಸಬೇಕು ಎಂದರು.

ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಶಾಸಕ ಮೊಯಿದಿನ್‌ ಬಾವಾ ಅವರು ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಬಾವಾ ಮಾತನಾಡಿ, ತಾನು ಯಾವುದೇ ಜಾತ ಮತ ಭೇದವಿಲ್ಲದೆ ಪ್ರತಿ ಸಮುದಾಯಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ವೈದ್ಯಕೀಯ ನೆರವು, ರಸ್ತೆಗಳ ಅಭಿವೃದ್ಧಿ , ಸಾರ್ವಜನಿಕರಿಗಾಗಿ ಮಾರುಕಟ್ಟೆ, ಶುದ್ಧ ಕುಡಿಯುವ ನೀರಿನ ಪೂರೈಕೆ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. ಕೆಲವು ಶಕ್ತಿಗಳು ತನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದು, ಇದಕ್ಕೆ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.

Advertisement

ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಉತ್ತಮ್‌ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್‌ನ ಅಭಿವೃದ್ಧಿ ಪರ ಚಿಂತನೆಗಳಿಂದ ನೂರಾರು ಯುವ ಶಕ್ತಿ ಪಕ್ಷ ಸೇರಲು ಉತ್ಸುಕವಾಗಿದ್ದು, ಅವರಿಗೆ ಸದಾ ಸ್ವಾಗತವಿದೆ ಎಂದರು.

ಪಕ್ಷ ಸೇರ್ಪಡೆ
ಸುಮಾರು ಮುನ್ನೂರಕ್ಕೂ ಮಿಕ್ಕಿ ಯುವಕರು ಕಾಂಗ್ರೆಸ್‌ ಸೇರ್ಪಡೆಗೊಂಡರು. ವಿದ್ಯಾರ್ಥಿ ವೇತನ ವಿತರಣೆ, ಅಕ್ಕಿ, ಸೀರೆ ವಿತರಣೆ, ಹಿರಿಯ ಕಾಂಗ್ರೆಸ್ಸಿಗರಿಗೆ ಸಮ್ಮಾನ, ಅಂಗವಿಕಲರಿಗೆ ಸೌಲಭ್ಯ ವಿತರಿಸಲಾಯಿತು. ದಿ| ಇಂದಿರಾಗಾಂಧಿ ಅವರಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ರ‍್ಯಾಲಿ
ಇದಕ್ಕೂ ಮುನ್ನ ಕೂಳೂರಿನಿಂದ ಯುವ ಕಾಂಗ್ರೆಸ್‌ ಆಯೋಜಿಸಿದ ವಾಹನ ರ‍್ಯಾಲಿಗೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಅಮೃತ್‌ ಗೌಡ ಚಾಲನೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಸಾದ್‌ ರಾಜ್‌ ಕಾಂಚನ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಸನಿಲ್‌, ಮಾಜಿ ಶಾಸಕ ವಿಜಯ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ್‌ ಚಿತ್ರಾಪುರ, ಅಬ್ದುಲ್‌ ಸತ್ತಾರ್‌, ಅಬ್ದುಲ್‌ ಅಜೀಜ್‌, ವಿಶ್ವಾಸ್‌ ದಾಸ್‌, ಗಿರೀಶ್‌ ಆಳ್ವ, ಮಮತಾ ಗಟ್ಟಿ, ಲಾವಣ್ಯಾ ಬಲ್ಲಾಳ್‌, ರಾಜಶೇಖರ ಕೋಟ್ಯಾನ್‌, ಮಂಗಳೂರು ಉತ್ತರ ಬ್ಲಾಕ್‌ ಕಾಂಗ್ರೆಸ್‌ ವಿವಿಧ ಉಪ ವಿಭಾಗಗಳ ಅಧ್ಯಕ್ಷರು, ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಕಾಂಗ್ರೆಸ್‌ನ ಶಕುಂತಳಾ ಕಾಮತ್‌ ಸ್ವಾಗತಿಸಿದರು. ಹುಸೈನ್‌ ಕಾಟಿಪಳ್ಳ, ರಾಜೇಶ್‌ ಕಾರ್ಯಕ್ರಮ ನಿರೂಪಿಸಿದರು.

ಕಾಂಗ್ರೆಸ್‌ ಸಾಧನೆ ಅಪಾರ
60 ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಬಿಜೆಪಿ ಪ್ರಶ್ನಿಸುತ್ತದೆ. ವೈಜ್ಞಾನಿಕ, ತಂತ್ರಜ್ಞಾನ, ಬ್ಯಾಂಕ್‌ ರಾಷ್ಟ್ರೀಕರಣ, ಆರ್ಥಿಕ ಸಶಕ್ತೀಕರಣ ಮಾಡಿದ ಕೀರ್ತಿ ಕಾಂಗ್ರೆಸ್‌ನದ್ದು. ಕಳೆದ ಬಾರಿ ಆರ್ಥಿಕ ಕುಸಿತವಾದಾಗಲೂ ದೇಶದಲ್ಲಿ ಯುಪಿಎ ಪ್ರಧಾನಿ ಮನಮೋಹನ್‌ ಸಿಂಗ್‌ ಪರಿಣತಿಯಿಂದಾಗಿ ಆರ್ಥಿಕ ಸ್ಥಿತಿ ಬಲಿಷ್ಠವಾಗಿತ್ತು. ಇಷ್ಟೆಲ್ಲ ಮಾಡಿದ್ದು ಬಿಜೆಪಿಯೇ ಎಂದು ಅವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next