Advertisement

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

02:05 PM Nov 19, 2024 | Team Udayavani |

ಮಹಾನಗರ: ಪಿಲಿಕುಳದ ಶಿವರಾಮ ಕಾರಂತ ನಿಸರ್ಗಧಾಮದಲ್ಲಿರುವ ಜೈವಿಕ ಉದ್ಯಾನವನದಲ್ಲಿ ಚಿಟ್ಟೆ ಪಾರ್ಕ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ. ಆ ಮೂಲಕ ಪ್ರವಾಸೋದ್ಯಮದಲ್ಲಿ ಹೊಸ ಹೆಜ್ಜೆಯನ್ನಿಡಲು ಪಿಲಿಕುಳ ಸಿದ್ಧವಾಗುತ್ತಿದೆ.

Advertisement

ಸದ್ಯ ಚಿಟ್ಟೆಗಳಿಗೆ ಬೇಕಾದ ಸೂಕ್ತ ಗಿಡಗಳನ್ನು ನೆಟ್ಟು ಬೆಳೆಸುವ ಪ್ರಕ್ರಿಯೆ ನಡೆಯುತ್ತಿದೆ. ಒಂದೊಂದು ಜಾತಿಯ ಚಿಟ್ಟೆಗಳಿಗೆ ಅವುಗಳದ್ದೇ ಇಷ್ಟದ ಗಿಡಗಳು, ಹೂವು ಬೇಕು. ಅದೇ ಮರ, ಗಿಡದ ಹೂವಿನ ಮಕರಂದ ಹೀರುವುದು, ಎಲೆಗಳನ್ನು ತಿನ್ನುತ್ತದೆ. ಸಂತಾನೋತ್ಪತ್ತಿಯನ್ನೂ ಮಾಡುತ್ತವೆ. ಪ್ರಸ್ತುತ ಎಂಆರ್‌ಪಿಎಲ್‌ ಸಂಸ್ಥೆಯ ಸಿಎಸ್‌ಆರ್‌ ನಿಧಿಯ ಸಹಕಾರದಲ್ಲಿ ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಕೆಲವೊಂದು ಗಿಡಗಳನ್ನು ಬೆಳೆಸಲಾಗಿದ್ದು, ಅದೇ ಸ್ಥಳವನ್ನು ಚಿಟ್ಟೆ ಪಾರ್ಕ್‌ಗೂ ಆಯ್ಕೆ ಮಾಡಲಾಗಿದೆ.

ಚಿಟ್ಟೆಗಳು ಜೈವಿಕ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ಜೀವಿಗಳಾಗಿವೆ. ನೋಡಲು ಆಕರ್ಷಣಿಯ ವಾಗಿರುವುದು ಮಾತ್ರವಲ್ಲದೆ, ಕೀಟ ನಿಯಂತ್ರಣ, ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಮಾವು, ಬೇವು, ನೆಲ್ಲಿ, ಹೊನ್ನೆ, ಜಾಮೂನ್‌, ದಾಸವಾಳ ಸಹಿತ ಕೆಲವು ಹೂವಿನ ಗಿಡಗಳು ಚಿಟ್ಟೆಗಳಿಗೆ ಅತಿಪ್ರಿಯವಾಗಿದೆ. ಪ್ರಸ್ತುತ ಪಿಲಿಕುಳದಲ್ಲಿರುವ ಮೃಗಾಲಯ, ಗುತ್ತಿನ ಮನೆ, ಕುಶಲಕರ್ಮಿಗಳ ಗ್ರಾಮ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಮೊದಲಾದವುಗಳು ಜತೆ ಮುಂದಿನ ದಿನಗಳಲ್ಲಿ ಚಿಟ್ಟೆ ಪಾರ್ಕ್‌ ಕೂಡ ಮಕ್ಕಳ ನೆಚ್ಚಿನ ತಾಣವಾಗಲಿದೆ.

ತೆರೆದ ಪ್ರದೇಶದಲ್ಲೇ ಪಾರ್ಕ್‌
ಈ ಮೊದಲು ಗ್ಲಾಸ್‌ಹೌಸ್‌ ಮಾದರಿಯಲ್ಲಿ ಗಾಜಿನ ಡೂಮ್‌ ನಿರ್ಮಾಣ ಮಾಡಿ ಅದರೊಳಗೆ ಗಿಡಗಳನ್ನು ನೆಟ್ಟು ಬೆಳೆಸಿ ಚಿಟ್ಟೆಗಳ ಪಾರ್ಕ್‌ ಮಾಡಲು ಉದ್ದೇಶಿಸಲಾಗಿತ್ತು. ಇದರ ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪ್ರಾಕೃತಿಕವಾಗಿಯೇ ತೆರೆದ ಪ್ರದೇಶದಲ್ಲಿಯೇ ಪಾರ್ಕ್‌ ಮಾಡಲು ಉದ್ದೇಶಿಸಲಾಗಿದೆ. ಚಿಟ್ಟೆಗಳ ಜೀವಾವಧಿ ಕೆಲವು ದಿನಗಳು ಮಾತ್ರ. ಗ್ಲಾಸ್‌ಹೌಸ್‌ ನಿರ್ಮಿಸಿದರೆ ಚಿಟ್ಟೆಗಳು ಅದರೊಳಗೆ ಸತ್ತು ಬಿದ್ದಿರುವುದು ಕೂಡಾ ಕಾಣಲು ಸಿಗುತ್ತದೆ. ಚಿಟ್ಟೆಗಳನ್ನು ನೋಡಲು ಬರುವವರಿಗೆ ಇದು ಆಭಾಸವಾಗುತ್ತದೆ ಎನ್ನುತ್ತಾರೆ ಉದ್ಯಾನವನದ ಪ್ರಮುಖರು.

ಗಿಡಗಳನ್ನು ನೆಟ್ಟು ಬೆಳೆಸಲು ಕ್ರಮ
ಪಿಲಿಕುಳದಲ್ಲಿ ಚಿಟ್ಟೆ ಪಾರ್ಕ್‌ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿದೆ. ಒಂದೊಂದು ಜಾತಿಯ ಚಿಟ್ಟೆಗಳಿಗೆ ಒಂದೊಂದು ಜಾತಿಯ ಗಿಡಗಳು ಆಹಾರ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆಗಳಿಗೆ ಅಗತ್ಯವಾಗಿದೆ. ಹಾಗಾಗಿ ಅಂತಹ ಗಿಡಗಳನ್ನು ನೆಟ್ಟು ಬೆಳೆಸಲು ಉದ್ದೇಶಿಸಲಾಗಿದೆ. ಶೀಘ್ರ ಇವುಗಳು ಚಿಟ್ಟೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ.
– ಎಚ್‌.ಜಯಪ್ರಕಾಶ್‌ ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ

Advertisement

ಅಧ್ಯಯನವೂ ಸಾಧ್ಯವಾಗಲಿದೆ
ಪಿಲಿಕುಳದ ಪ್ರಯೋಗಾಲಯದಲ್ಲಿ ಚಿಟ್ಟೆಗಳಿಗೆ ಸಂತಾನೋತ್ಪತ್ತಿ ಮಾಡುವ ಪ್ರಕ್ರಿಯೆ ನಡೆಸಲು, ಚಿಟ್ಟೆಗಳ ಬಗ್ಗೆ ಅಧ್ಯಯನ ನಡೆಸಲೂ ಸಾಧ್ಯವಾಗ ಲಿದೆ. ಪಾರ್ಕ್‌ ಹಾಗೂ ಇತರ ಪ್ರಕ್ರಿಯೆಗಳನ್ನು ಪಿಲಿಕುಳದ ಪ್ರಾಣಿ -ಸಸ್ಯಶಾಸ್ತ್ರಜ್ಞರೇ ನಿರ್ವಹಿಸಲಿದ್ದಾರೆ.

ಮೂಡುಬಿದಿರೆ – ಮಂಗಳೂರಿನಲ್ಲಿ ಪಾರ್ಕ್‌
ಮೂಡುಬಿದಿರೆಯ ಬೆಳುವಾಯಿಯಲ್ಲಿ ಚಿಟ್ಟೆ ಪಾರ್ಕ್‌ ಪರಿಕಲ್ಪನೆಯನ್ನು ಸಮ್ಮಿಲನ್‌ ಶೆಟ್ಟಿ ಅವರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು. ಸಾಕಷ್ಟು ಮಂದಿ ಪ್ರವಾಸಿಗರು, ವಿದ್ಯಾರ್ಥಿಗಳು ಪ್ರತಿದಿನ ಇಲ್ಲಿಗೆ ಭೇಟಿ ನೀಡಿ, ಚಿಟ್ಟೆಗಳ ಕುರಿತಂತೆ ಮಾಹಿತಿ ಪಡೆಯುತ್ತಿದ್ದಾರೆ. ಮಂಗಳೂರು ನಗರ ವ್ಯಾಪ್ತಿಯಲ್ಲಿಯೂ ಮಂಗಳಾ ಕ್ರೀಡಾಂಗಣದ ಬಳಿ ಚಿಟ್ಟೆಪಾರ್ಕ್‌ ರಚಿಸಲಾಗಿದ್ದು, ಚಿಟ್ಟೆಗಳನ್ನು ಆಕರ್ಷಿಸುವಲ್ಲಿ ಇದು ಕೂಡ ಯಶಸ್ವಿಯಾಗಿದೆ.

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next