ವಯನಾಡ್: ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡ್ ಲೋಕಸಭೆ ಕ್ಷೇತ್ರದ ಉಪಚುನಾವಣೆ ಬುಧವಾರ(ನ.13) ನಡೆಯಲಿದೆ.
ಕಾಂಗ್ರೆಸ್ನ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆಯಿಂದಾಗಿ ಈ ಉಪಚುನಾವಣೆಯು ದೇಶದ ಗಮನ ಸೆಳೆದಿದೆ. ಇಲ್ಲಿಂದ ಗೆದ್ದರೆ ಪ್ರಿಯಾಂಕಾ ಅವರು ಅಧಿಕೃತವಾಗಿ ಚುನಾವಣ ರಾಜಕಾರಣಕ್ಕೆ ಪ್ರವೇಶ ಪಡೆಯಲಿದ್ದಾರೆ.
ಆಗಸ್ಟ್ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ತತ್ತರಿಸಿರುವ ವಯನಾಡು ಜನರು ಆರೇಳು ತಿಂಗಳಲ್ಲೇ ಮತ್ತೂಮ್ಮೆ ತಮ್ಮ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಕೇರಳದ ಒಟ್ಟು 20 ಲೋಕಸಭೆ ಕ್ಷೇತ್ರಗಳಲ್ಲಿ ವಯನಾಡ್ ಕ್ಷೇತ್ರ ತನ್ನದೇ ಕಾರಣಗಳಿಂದ ವಿಶಿಷ್ಟವಾಗಿದೆ. ಪ್ರಿಯಾಂಕಾ ವಾದ್ರಾ (ಕಾಂಗ್ರೆಸ್), ನವ್ಯಾ ಹರಿದಾಸ್(ಬಿಜೆಪಿ), ಸತ್ಯನ್ ಮೋಕೇರಿ(ಎಲ್ಡಿಎಫ್) ಸೇರಿ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದ 14 ಮತದಾರರಿದ್ದಾರೆ.
ಪ್ರಿಯಾಂಕಾ ಗಾಂಧಿ ಗೆಲ್ತಾರಾ?: ಸಾಕಷ್ಟು ರಾಜಕೀಯ ಅನುಭವವಿದ್ದರೂ ಇದೇ ಮೊದಲ ಬಾರಿಗೆ ಚುನಾವಣ ರಾಜಕೀಯಕ್ಕೆ ಪ್ರಿಯಾಂಕಾ ಧುಮುಕಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ ನಾಯಕರು ಹಗಲಿರುಳು ಪ್ರಚಾರ ನಡೆಸಿದ್ದಾರೆ. ರಾಹುಲ್ ಗಾಂಧಿ ಕೂಡ, ವಯನಾಡಿಗೆ ಇಬ್ಬರು ಎಂಪಿಗಳಿರಲಿದ್ದಾರೆ ಎಂದು ಹೇಳುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ, ಪ್ರಿಯಾಂಕಾ ಕೂಡ ಭಾವನಾತ್ಮಕವಾಗಿ ಜನರನ್ನು ತಲುಪುತ್ತಿದ್ದಾರೆ.
ಬಿಜೆಪಿ, ಎಲ್ಡಿಎಫ್ ಅಭ್ಯರ್ಥಿಗಳು: ಕಾಂಗ್ರೆಸ್ಗೆ ಪ್ರಬಲ ಸ್ಪರ್ಧೆಯನ್ನು ಒಡುತ್ತಿರುವುದು ಎಲ್ಡಿಎಫ್ನ ಸತ್ಯನ್ ಹಾಗೂ ಬಿಜೆಪಿ ನವ್ಯಾ ಹರಿದಾಸ್. ಮಾಜಿ ಐಟಿ ಉದ್ಯೋಗಿಯಾಗಿರುವ ನವ್ಯಾ ವಯನಾಡ್ನಲ್ಲಿ ಚಿರಪರಿಚಿತರು. ಕಾಂಗ್ರೆಸ್ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಯಾವುದೇ ಕೆಲಸಗಳಾಗಿಲ್ಲ ಪ್ರಚಾರ ಮಾಡುತ್ತಿದ್ದಾರೆ. ನವ್ಯಾ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆಂಬ ಸುದ್ದಿಯನ್ನು ಹರಡಲಾಗಿದೆ. ಇನ್ನು, ಎಲ್ಡಿಎಫ್ನ ಅಭ್ಯರ್ಥಿ ಸತ್ಯನ್ ಒಮ್ಮೆ ಶಾಸಕರಾಗಿದ್ದವರು. ಸಾಕಷ್ಟು ಚಿಪರಿಚಿತ ವ್ಯಕ್ತಿ. ವಯನಾಡಿಗೆ ಶಾಶ್ವತ ಜನಪ್ರತಿನಿಧಿ ಬೇಕು. ರಾಹುಲ್ರಂತೆ ಪ್ರಿಯಾಂಕಾ ಕೂಡ ಕ್ಷೇತ್ರ ತೊರೆಯುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಇಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಮತದಾರರು ಯಾರಿಗೆ ತಮ್ಮ ಮುದ್ರೆ ಒತ್ತಲಿದ್ದಾರೆಂಬುದು ಇನ್ನೂ ನಿಗೂಢವಾಗಿದೆ.
ಕ್ಷೇತ್ರದಲ್ಲಿ ಸಮಸ್ಯೆಗಳು: ಸಾಕಷ್ಟು ಅರಣ್ಯ ಪ್ರದೇಶದಿಂದ ಕೂಡಿರುವ ವಯನಾಡ್ನಲ್ಲಿ ಆಗಸ್ಟ್ನಲ್ಲಿ ಸಂಭವಿಸಿದ ಭೂಕುಸಿತ ಭಾರೀ ನಷ್ಟವನ್ನು ಸೃಷ್ಟಿಸಿದೆ. ಜನರಿಗೆ ಪುನರ್ವಸತಿ ಕಲ್ಪಿಸಬೇಕಿದೆ. ವನ್ಯಪ್ರಾಣಿ-ಮಾನವ ಸಂಘರ್ಷ, ನಿರುದ್ಯೋಗ ವಿಷಯಗಳು ಹೆಚ್ಚು ಪ್ರಚಾರದಲ್ಲಿ ಚರ್ಚಿತವಾಗುತ್ತಿವೆ. ಇದಲ್ಲದೇ ಇನ್ನೂ ಸಾಕಷ್ಟು ಸ್ಥಳೀಯ ಸಮಸ್ಯೆಗಳು ಪ್ರಚಾರದ ಸರಕಾಗಿವೆ. ಹಾಗಾಗಿ ಈ ಕ್ಷೇತ್ರವು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.
ಜಾತಿ ಸಮೀಕರಣ: ಶೇ.18.5ರಷ್ಟು ಬಡುಕಟ್ಟು ಜನರಿದ್ದಾರೆ. ಪನ್ನಿಯನ್ ಮುದಾಯದವರು (ಶೇ.44) ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಮುಲ್ಲು ಕುರುಮಾನ್, ಕುರಿಚಿಯಾನ್, ಕಟ್ಟುನೈಚಕನ್, ಆದಿಯಾನ್, ಉರ್ಲಿ ಕುರುಮಾನ್ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ.