“ಚಿತ್ರ ಏನೇ ರಗಡ್ ಆಗಿದ್ರೂ, ಏನೇ ಏಯ್ ಪ್ಯಾಕ್ ಇದ್ರೂ, ಕ್ಲೈಮ್ಯಾಕ್ಸ್‌ನಲ್ಲಿ ಜನ ಅತ್ತೇ ಅಳ್ತಾರೆ …’
ತುಂಬು ವಿಶ್ವಾಸದಿಂದ ಹೇಳಿಕೊಂಡರು ವಿನೋದ್ ಪ್ರಭಾಕರ್. ಅಂದು ಅವರ ಧ್ವನಿ ಅಷ್ಟೇನೂ ಒಳ್ಳೆಯ ಸ್ಥಿತಿಯಲ್ಲಿರಲಿಲ್ಲ. ಬೆಳಿಗ್ಗೆ ಯಾವುದೋ ಹೊಸ ಚಿತ್ರದ ಫೋಟೋ ಶೂಟ್‌ಗೆ ಹೋಗಿದ್ದರಂತೆ ಅವರು. ಅಲ್ಲಿ ಕಿರುಚಾಡಿ, ಅವರ ಧ್ವನಿ ಕೆಟ್ಟಿತ್ತು. ಆದರೆ, ತಮ್ಮದೇ ಚಿತ್ರದ ಸಮಾರಂಭ. ಮಾತನಾಡಲ್ಲ ಎನ್ನುವ ಹಾಗಿಲ್ಲ. ಹಾಗಾಗಿ ತನ್ನ ಧ್ವನಿ ಸರಿ ಇಲ್ಲ ಎಂದು ನಡಗುವ ಕಂಠದಲ್ಲೇ, ಮೈಕೆತ್ತಿಕೊಂಡರು ಅವರು.
ವಿನೋದ್ ಮಾತಾಡಿದ್ದು “ರಗಡ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಆದರೆ, ಆಗಸ್ಟ್ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆ. ಈ ಮಧ್ಯದ ಗ್ಯಾಪ್‌ನಲ್ಲಿ ಚಿತ್ರತಂಡದವರು ಚಾಮುಂಡೇಶ್ವರಿಯಲ್ಲಿ ಟ್ರೇಲರ್ ಬಿಡುಗಡೆ ಮಾಡಿದರು. ನಿರ್ಮಾಪಕ ಅರುಣ್ ಅವರ ತಾಯಿ ಟ್ರೇಲರ್ ಬಿಡುಗಡೆ ಮಾಡಿ, ತಮ್ಮ ಮಗನ ಮೊದಲ ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು. ಆ ನಂತರ ಮೈಕು ಇನ್ನಿಬ್ಬರ ಕೈಗೆ ಪಾಸ್ ಆಗಿ, ವಿನೋದ್ ಕೈಗೆ ಬಂತು.
“ಇದುವರೆಗೂ ಹಲವು ಆ್ಯಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದು ಬೇರೆ ತರಹದ ಸಿನಿಮಾ. ಬೇರೆ ತರಹ ಹೇಗೆ ಅಂದರೆ, ಇದುವರೆಗೂ ನಾನು ಯಾವ ಚಿತ್ರದಲ್ಲೂ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿರಲಿಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಲವ್ವರ್ ಬಾಯ್ ಆಗಿದ್ದೇನೆ. ಇಲ್ಲಿ ನನ್ನ ಅಭಿನಯ, ಮಾತಿನ ಶೈಲಿ ಎಲ್ಲವೂ ಬದಲಾಗಿದೆ. ಗ್ಯಾಪ್ ಇಲ್ಲದೆ, ಸತತವಾಗಿ ಮಾತಾಡಿದ್ದೀನಿ. ಇದು ಆ್ಯಕ್ಷನ್ ಚಿತ್ರವಾದರೂ, ಇದೊಂದು ಸೆಂಟಿಮೆಂಟ್ ಚಿತ್ರ. ಫ್ಯಾಮಿಲಿ ಚಿತ್ರ. ಪೈಸಾ ವಸೂಲ್ ಚಿತ್ರ. ಚಿತ್ರ ಏನೇ ರಗಡ್ ಆಗಿದ್ರೂ, ಏನೇ ಏಯ್r ಪ್ಯಾಕ್ ಇದ್ರೂ, ಕ್ಲೈಮ್ಯಾಕ್ಸ್‌ನಲ್ಲಿ ಜನ ಅತ್ತೇ ಅಳ್ತಾರೆ. ಅಭಿಮಾನ್ ರಾಯ್ ಬಹಳ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಒಂದು ಅದ್ಭುತವಾದ ಪ್ಯಾಥೋ ಹಾಡಿದೆ, “ಏಕೆ ಹೇಳದೆ ಹೋದೆ …’ ಅಂತ. ಹಾಡು ಕೇಳಿ ಅಳು ಬಂತು. ಗ್ಲಿಸರಿನ್ ಕೊಡಬೇಡಿ, ಹಾಗೇ ಅಳ್ತೀನಿ ಅಂದೆ. ನನ್ನ ನೋಡಿ ಸೆಟ್‌ನಲ್ಲಿರುವರೆಲ್ಲಾ ಅಳುತ್ತಿದ್ದರು. ಅಷ್ಟೊಂದು ಪ್ಯಾಥೋ ಫೀಲ್‌ನ ಹಾಡು ಅದು’ ಎಂದರು. ಮಾತು ಮುಗಿಸುವ ಮುನ್ನ, “ಜನರ ಮನಸ್ಸಿನಲ್ಲಿರುವಾಗಲೇ ಬೇಗ ಬಿಡುಗಡೆ ಮಾಡಿ’ ಅಂತ ಹೇಳುವುದರ ಜೊತೆಗೆ, ಚಿತ್ರಕ್ಕೆ ಕಾರಣರಾದವರ ಸಹಕಾರ ನೆನೆದರು. ಈ ಚಿತ್ರವನ್ನು ಅರುಣ್ ಕುಮಾರ್ ನಿರ್ಮಿಸಿದರೆ, ಮಹೇಶ್ ಗೌಡ ನಿರ್ದೇಶಿಸಿದ್ದಾರೆ. ಇನ್ನು ಚೈತ್ರ ರೆಡ್ಡಿ, ವಿನೋದ್ ಪ್ರಭಾಕರ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನ್ ರಾಯ್ ಅವರ ಸಂಗೀತ ಮತ್ತು ಜೈ ಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಂದು ಎಲ್ಲರೂ ಚಿತ್ರ ರೂಪುಗೊಂಡಿದ್ದರ ಕುರಿತು ಮಾತನಾಡುವುದರ ಜೊತೆಗೆ, ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದ ಬಗ್ಗೆ ಮಾತಾಡಿದರು.