ಈ ಹಿಂದೆ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ (Raj Sounds & Lights) ಚಿತ್ರದ ಮೂಲಕ ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಾಹುಲ್ ಅಮೀನ್ (Rahul Amin) ಮತ್ತು ವಿನೀತ್ ಕುಮಾರ್ (Vineeth Kumar) ಅವರ ಕಾಂಬಿನೇಶನ್ ನ ಮತ್ತೊಂದು ಚಿತ್ರ ʼಮಿಡಲ್ ಕ್ಲಾಸ್ ಫ್ಯಾಮಿಲಿʼ ತೆರೆಗೆ ಬರಲು ಸಜ್ಜಾಗಿದೆ. ಇದೀಗ ಚಿತ್ರತಂಡವು ರಿಲೀಸ್ ದಿನಾಂಕವನ್ನೂ ಘೋಷಿಸಿದ್ದು, ಜನವರಿ 24ರಂದು ಮಿಡಲ್ ಕ್ಲಾಸ್ ಫ್ಯಾಮಿಲಿ ಚಿತ್ರ ಸಿನಿಪ್ರಿಯರ ಎದುರಿಗೆ ಬರಲಿದೆ.
ವೈಭವ್ ಫ್ಲಿಕ್ಸ್, ಮ್ಯಾಂಗೋ ಪಿಕಲ್ ಎಂಟರ್ಟೈನ್ ಮೆಂಟ್ ಪ್ರೆಸೆಂಟ್ ಮಾಡುತ್ತಿರುವ ಚಿತ್ರವನ್ನು ಆನಂದ್ ಎನ್ ಕುಂಪಲಾ ನಿರ್ಮಾಣ ಮಾಡಿದ್ದಾರೆ. ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಯಶಸ್ವಿ ಚಿತ್ರದ ಬಳಿಕ ರಾಹುಲ್ ಅಮೀನ್ ಮತ್ತೆ ಆಕ್ಷನ ಕಟ್ ಹೇಳಿದ್ದಾರೆ.
ವಿನೀತ್ ಕುಮಾರ್ ಗೆ ಸಮತಾ ಅಮೀನ್ ಅವರು ನಾಯಕಿಯಾಗಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿನೀತ್ ಕುಮಾರ್ ಅವರ ಕಥೆ, ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದು, ವಿಷ್ಣು ಪ್ರಸಾದ್ ಕ್ಯಾಮರಾ ಕೈಚಳಕವಿದೆ.