ಕೆಲವು ಚಿತ್ರಗಳೇ ಹಾಗೆ ಕಣ್ಮುಚ್ಚಿದರೂ ಕಣ್ಮುಂದೆ ಹಾಗೆ ಅಚ್ಚಳಿಯದಂತೆ ಬರುತ್ತವೆ. ಒಂದಷ್ಟು ಪಾತ್ರಗಳು, ಜಾಗಗಳು, ಹಾಡುಗಳ ಮೂಲಕ ಕಥೆ ನಮಗೆ ಹತ್ತಿರವಾಗಿವೆ ಎನಿಸಿ ಬಿಡುತ್ತದೆ. ಮನಸಲ್ಲಿ ಅಚ್ಚಳಿಯದ ಅಂತಹ ಅನುಭವ ನೀಡುವ ಸಿನಿಮಾ ಅನೀಶ್ ಪೂಜಾರಿ ವೇಣೂರು ನಿರ್ದೇಶನದ ʼದಸ್ಕತ್ʼ.
ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳೂ ನಾಯಕ ನಟರೇನೋ ಅನ್ನುವ ಹಾಗೆ ಭಾಸವಾಗುತ್ತದೆ. ಸಿನೆಮಾ ಕಡೆಗೆ ಆ ಪಾತ್ರಗಳ ಕೊಡುಗೆ ಅದ್ಭುತ. ತುಳುನಾಡಿನ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಎತ್ತಿ ಹಿಡಿಯುವುದರ ಜೊತೆಗೆ ಸರಕಾರದ, ಜಾತಿ ವ್ಯವಸ್ಥೆಯ ಒಂದಷ್ಟು ವಿಚಾರಗಳಿಗೆ ಈ ಚಿತ್ರ ಕನ್ನಡಿ ಹಿಡಿದಿದೆ.
ಚಿಗುರು ಪ್ರೀತಿ, ತಾಯಿಯ ಅಕ್ಕರೆ, ನಗು, ಅಳು, ಹೀಗೆ ನವರಸಗಳಿಗೂ ಮಣೆ ಹಾಕಿರುವ ಸಿನೆಮಾದ ಮುಖ್ಯ ಆಕರ್ಷಣೆ ಛಾಯಾಗ್ರಹಣ ಮತ್ತು ಸಂಗೀತ. ಕೆಲ ರೂಪಕಗಳ ಬಳಕೆ ಸಿನೆಮಾವನ್ನು ನೀರಿನಂತೆ ಹರಿಯುವ ಹಾಗೆ ಮಾಡಿವೆ.
ಗಟ್ಟಿ ಕಥೆಯನ್ನೇ ನಂಬಿರುವ ಚಿತ್ರ ತುಳು ರಂಗಕ್ಕೆ ಹೊಸ ಆಯಾಮ ನೀಡುವಂತಿದೆ. ಈ ಚಿತ್ರದ ಬಳಿಕ ಕಾಮಿಡಿ ಹೊರತಾದ ತುಳು ಸಿನಿಮಾಗಳನ್ನು ತರುವ ಧೈರ್ಯವನ್ನು ನಿರ್ಮಾಪಕರು ತೋರಬಹುದು.
ತುಳುನಾಡು ತಬ್ಬುವಂತೆ ಭಾಸವಾಗಿಸುವ ಸಿನೆಮಾ. ಮನದಲ್ಲಿ ಅಚ್ಚಳಿಯದ ಒಂದು ಸಹಿ ಹಾಕುವ ಚಿತ್ರ ದಸ್ಕತ್. ಒಂದು ಕಲಾತ್ಮಕ ಅನುಭವವನ್ನು ಆಸ್ವಾದಿಸಬೇಕೆಂದರೆ ನೀವು ಸಿನೆಮಾ ನೋಡಬೇಕು.
ತೇಜಸ್ವಿನಿ