Advertisement

ಬೀದಿ ವ್ಯಾಪಾರ ಮುಕ್ತ  ರಸ್ತೆಗೆ ಶೀಘ್ರದಲ್ಲಿ ಸಮೀಕ್ಷೆ 

10:52 AM Jul 07, 2018 | Team Udayavani |

ಮಹಾನಗರ : ಶಿವಮೊಗ್ಗದಲ್ಲಿರುವ ಗಾಂಧಿ ಬಜಾರ್‌ ಮಾದರಿಯಲ್ಲಿ ನಗರವನ್ನೂ ಬೀದಿ ವ್ಯಾಪಾರ ಮುಕ್ತ ರಸ್ತೆಯನ್ನಾಗಿಸುವ ಬಗ್ಗೆ ಚಿಂತನೆ ಇದ್ದು, ಈ ನಿಟ್ಟಿನಲ್ಲಿ ಸಮೀಕ್ಷೆಯನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ತಿಳಿಸಿದ್ದಾರೆ.

Advertisement

ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. ನಗರದ ಲೇಡಿಗೋಶನ್‌ ಆಸ್ಪತ್ರೆ ಬಳಿಯಿಂದ ಕ್ಲಾಕ್‌ ಟವರ್‌ ತನಕ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ಕಷ್ಟವಾಗಿದೆ. ರವಿವಾರ ಈ ರಸ್ತೆಯಲ್ಲಿ ಓಡಾಡುವುದು, ಬಸ್‌ ಹತ್ತುವುದೂ ಕಷ್ಟ. ಇದಕ್ಕೆ ಪರಿಹಾರ ಅಗತ್ಯ ಎಂದು ಸಾರ್ವಜನಿಕರೊಬ್ಬರು ಕರೆ ಮಾಡಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌, ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗ, ಮೂಲ ಸೌಲಭ್ಯಗಳನ್ನು ಕಲ್ಪಿಸಿದ ಬಳಿಕ ಎರಡು ತಿಂಗಳ ಹಿಂದೆಯಷ್ಟೇ ವ್ಯಾಪಾರಿಗಳೆಲ್ಲರೂ ಸ್ಥಳಾಂತರಗೊಂಡಿದ್ದಾರೆ. ಅಂತಹುದೇ ಪ್ರಯೋಗ ನಗರದಲ್ಲಿ ನಡೆಸುವ ಉದ್ದೇಶವಿದೆ. ಈ ಬಗ್ಗೆ ಸರ್ವೆ ನಡೆಸುವಂತೆ ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಅವರಿಗೆ ಸೂಚಿಸಿದರು.

ಲೇಡಿಗೋಶನ್‌ನಿಂದ ಸೆಂಟ್ರಲ್‌ ಮಾರುಕಟ್ಟೆಗೆ ಹೋಗುವ ರಸ್ತೆಯನ್ನು ಬೀದಿ ವ್ಯಾಪಾರಿಗಳಿಂದ ಮುಕ್ತವಾಗಿಸುವ ಬಗ್ಗೆ ಸಲಹೆ ವ್ಯಕ್ತವಾಯಿತು. ಬೀದಿ ವ್ಯಾಪಾರಿಗಳಿಗೆ ಈಗಾಗಲೇ ಪಾಲಿಕೆಯು ಸ್ಥಳ ಗುರುತಿದ್ದು, ಅಲ್ಲಿಗೆ ಸ್ಥಳಾಂತರಿಸಲು ಹಲವು ಬಾರಿ ಪ್ರಯತ್ನ ನಡೆದಿದೆ. ಆದರೆ ಯಶಸ್ವಿಯಾಗಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಬೀದಿ ವ್ಯಾಪಾರವನ್ನು ಅಲ್ಲಿಗೆ ವರ್ಗಾಯಿಸಲು ಸಾಧ್ಯವಿದೆ. ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಲು ಮೊದಲಿಗೆ ಸಮೀಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.

ಸಂಚಾರ ವ್ಯವಸ್ಥೆ ಬಗ್ಗೆ ಸಭೆ
ನಗರದಲ್ಲಿ 70ರ ದಶಕದಲ್ಲಿ 15 ನಿಮಿಷಕ್ಕೊಂದು ಕಾರು, ಬಸ್‌ ಓಡಾಡುತ್ತಿದ್ದವು. ಈಗ ರಸ್ತೆ ದಾಟಲು 15- 20 ನಿಮಿಷ ಕಾಯುವ ಸ್ಥಿತಿ ಇದೆ. ನಗರದ ಒಳಗಡೆ ಫ್ಲೈಓವರ್‌ ನಿರ್ಮಾಣ ಮಾಡುವ ಬಗ್ಗೆ ಎಲ್ಲ ಶಾಸಕರು, ಸಂಸದರು, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು ಎಂದು ಕುತ್ತಾರ್‌ನ ವ್ಯಕ್ತಿಯೊಬ್ಬರು ಸಲಹೆ ಮಾಡಿದರು. 

Advertisement

ಇದಕ್ಕೆ ಉತ್ತರಿಸಿದ ಕಮಿಷನರ್‌, ಈ ತಿಂಗಳಿನಲ್ಲಿ ರಸ್ತೆ ಸುರಕ್ಷಾ ಮಾಸಾಚರಣೆ ನಡೆಯಲಿದ್ದು, ಆಗ ಸಭೆ ನಡೆಸಲಾಗುವುದು ಎಂದರು. ಮೂಡಬಿದಿರೆಯಲ್ಲಿ ಟೂರಿಸ್ಟ್‌ ಟ್ಯಾಕ್ಸಿ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿಯವರು ಪಾರ್ಕಿಂಗ್‌ ಮಾಡುತ್ತಿದ್ದು, ಪ್ರಶ್ನಿಸಲು ಹೋದರೆ ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಟ್ಯಾಕ್ಸಿ ಚಾಲಕರೊಬ್ಬರು ದೂರು ನೀಡಿದರು.

ಟ್ಯಾಕ್ಸಿ ನಿಲ್ದಾಣದಲ್ಲಿ ದಿನವಿಡೀ ಪಾರ್ಕ್‌ ಮಾಡಲು ಯಾರಿಗೂ ಅವಕಾಶವಿಲ್ಲ. ಹಲ್ಲೆಗೆ ಮುಂದಾದರೆ ಪೊಲೀಸ್‌ ಠಾಣೆಗೆ ದೂರು ಕೊಡಿ ಎಂದು ಕಮಿಷನರ್‌ ಹೇಳಿದರು. ನಗರದಲ್ಲಿ ಸಂಚರಿಸುವ 61 ಮತ್ತು 10ಎ ನಂಬ್ರದ ಸಿಟಿ ಬಸ್‌ ಗಳಲ್ಲಿ ಶಾಲಾ ಮಕ್ಕಳಿಗೆ ರಿಯಾಯಿತಿ ನೀಡುವುದಿಲ್ಲ. 10 ರೂ. ನೀಡಿದರೆ ಚಿಲ್ಲರೆ ಹಿಂದಿರುಗಿಸುವುದಿಲ್ಲ ಎಂದು ಕಪಿತಾನಿಯಾದಿಂದ ಮಹಿಳೆ ತಿಳಿಸಿದರು. ಸಿಟಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸ್‌ ಹೊಂದಿದ್ದರೆ ಶೇ. 60ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ತಿಳಿಸಿದರು.

ಬಸ್‌ ಬೇ ಒಳಗಡೆ ವಾಹನ ಪಾರ್ಕ್‌
ಕದ್ರಿ ಮಲ್ಲಿಕಟ್ಟೆ ಬಸ್‌ ನಿಲ್ದಾಣದಲ್ಲಿ ಬಸ್‌ ಬೇ ಒಳಗಡೆ ಇತರ ವಾಹನಗಳನ್ನು ಪಾರ್ಕ್‌ ಮಾಡುವುದರಿಂದ ಬಸ್‌ನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳಬೇಕಾಗಿದೆ. ಇದರಿಂದ ಟ್ರಾಫಿಕ್‌ ಜಾಂ ಉಂಟಾಗುತ್ತಿದೆ ಎಂಬ ದೂರು ಸಾರ್ವಜನಿಕರೊಬ್ಬರಿಂದ ಕೇಳಿ ಬಂತು. ಈ ಬಗ್ಗೆ ಸಿಸಿ ಟಿವಿ ಫೂಟೇಜ್‌ ಪರಿಶೀಲಿಸಿ ಸಂಬಂಧ ಪಟ್ಟ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕಮಿಷನರ್‌ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಬೆಂದೂರ್‌ವೆಲ್‌ನಲ್ಲಿ ಶಾಲೆ ಆರಂಭ ಹಾಗೂ ಶಾಲೆ ಬಿಡುವ ವೇಳೆ ಪೊಲೀಸರನ್ನು ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರೊಬ್ಬರು ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌ ಶಾಲಾ ಆಡಳಿತವರು ಕೂಡ
ಈ ಬಗ್ಗೆ ಗಮನ ವಹಿಸಿ ಭದ್ರತಾ ಸಿಬಂದಿ ನೇಮಿಸಲು ಕ್ರಮ ಕೈಗೊಳ್ಳಬೇಕು. ಪೊಲೀಸರನ್ನೂ ನಿಯೋಜನೆ ಮಾಡಲಾಗುವುದು ಎಂದರು.

ಕೋಡಿಕಲ್‌ ಕ್ರಾಸ್‌, ಕೊಟ್ಟಾರ, ಲಾಲ್‌ಬಾಗ್‌ ಜಂಕ್ಷನ್‌ಗಳಲ್ಲಿ ನಡು ರಸ್ತೆಯಲ್ಲಿ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ ಎಂಬ ದೂರಿಗೆ ಸ್ಪಂದಿಸಿದ ಕಮಿಷನರ್‌ ಈ ಕುರಿತಂತೆ ಸಿಸಿ ಟಿವಿ ಫೂಟೇಜ್‌ ವೀಕ್ಷಿಸಿ ಕ್ರಮ ಜರಗಿಸುವಂತೆ ಎಸಿಪಿ ಮಂಜುನಾಥ ಶೆಟ್ಟಿ ಅವರಿಗೆ ಸೂಚಿಸಿದರು.

ವೇಗವಾಗಿ ವಾಹನ ಚಲಾವಣೆ
ಕೋಡಿಕಲ್‌ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ರಸ್ತೆ ದಾಟಲು ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದರು. ಪ್ರತಿಕ್ರಿಯಿಸಿದ ಎಸಿಪಿ ಮಂಜುನಾಥ್‌, ಇಲ್ಲಿ ವಾಹನಗಳ ವೇಗ ನಿಯಂತ್ರಸಲು ಈ ಹಿಂದೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಆದರೆ ರಾತ್ರಿ ವೇಳೆ ಕೆಲವು ಘನ ವಾಹನಗಳ ಬ್ಯಾರಿಕೇಡ್‌ ಗೆ ಢಿಕ್ಕಿ ಹೊಡೆಸಿಕೊಂಡು ಹೋಗುತ್ತಾರೆ. ಈಗಾಗಲೇ ಐದಾರು ಬ್ಯಾರಿಕೇಡ್‌ಗಳಿಗೆ ಹಾನಿಯಾಗಿದೆ ಎಂದರು.

ತ್ಯಾಜ್ಯ ರಾಶಿ
ಗುರುಪುರ ಬಸ್‌ ತಂಗುದಾಣದ ಬಳಿ ಬಾರ್‌ ಅವರು ತ್ಯಾಜ್ಯ ಹಾಕುವುದರಿಂದ ವಾಸನೆ ಬರುತ್ತಿದೆ ಎಂದು ಗುರುಪುರದ
ನಿವಾಸಿಯೊಬ್ಬರು ದೂರು ನೀಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸುವಂತೆ ಸಂಬಂಧ ಪಟ್ಟ ಪೊಲೀಸರಿಗೆ ಕಮಿಷನರ್‌ ಸೂಚಿಸಿದರು. ಇದು 82ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 33 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಕುಮಾರಸ್ವಾಮಿ, ಎಎಸ್‌ಐ ಯೂಸುಫ್‌, ಹೆಡ್‌ಕಾನ್ಸ್‌ಟೆಬಲ್‌ ಪುರುಷೋತ್ತಮ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next