Advertisement

Crop Survey of Monsoon: ರೈತರಿಗೆ ಸವಾಲಾದ ಮುಂಗಾರು ಬೆಳೆ ಸಮೀಕ್ಷೆ

01:48 AM Sep 01, 2024 | Team Udayavani |

ಪುತ್ತೂರು: ಮುಂಗಾರು ರೈತರ ಬೆಳೆ ಸಮೀಕ್ಷೆಗೆ ಸಂಬಂಧಿಸಿ ರೈತರ ಆ್ಯಪ್‌, ಪಿಆರ್‌ ಆ್ಯಪ್‌ಗ್ಳಲ್ಲಿ ಪದೇಪದೆ ತಾಂತ್ರಿಕ ಸಮಸ್ಯೆ ಕಂಡು ಬರುತ್ತಿದ್ದು, ಇದರಿಂದ ರೈತರು ದಿನವಿಡೀ ತೋಟದೊಳಗೆ ಅಲೆದಾಡುವಂತಾಗಿದೆ. ರೈತರೇ ಮೊಬೈಲ್‌ ಆ್ಯಪ್‌ ಬಳಸಿ ಸ್ವತಂತ್ರವಾಗಿ ಬೆಳೆ ಸಮೀಕ್ಷೆ ನಡೆಸುವ ಅವಕಾಶ ಇದ್ದರೂ ಈ ಬಾರಿ ಆ್ಯಪ್‌ನಲ್ಲಿರುವ ಗ್ರಾಮ ನಕ್ಷೆ ಲೋಪ(ಜಿಪಿಎಸ್‌ ಮ್ಯಾಪ್‌), ಹಿಸ್ಸಾವಾರು ವಿಭಜನೆ ರೈತರಿಗೆ ಆ್ಯಪ್‌ ಬಳಸುವ ವಿಧಾನ ಕಠಿನ ಎಂಬಂತಾಗಿದೆ.

Advertisement

ಸಮೀಕ್ಷೆ ಹೇಗೆ?
ಪ್ಲೇ ಸ್ಟೋರ್‌ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ 2024-25 ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿರುವ ಎಲ್ಲ ನಿಬಂಧನೆಗಳಿಗೆ ಒಪ್ಪಿಗೆ ಸೂಚಿಸಿದ ಬಳಿಕ ಆರ್‌ಟಿಸಿಯಲ್ಲಿ ಹೆಸರಿರುವ ವ್ಯಕ್ತಿಯ ಆಧಾರ್‌ಕಾರ್ಡ್‌ ಸಂಖ್ಯೆ ನಮೂದಿಸಬೇಕು. ಅನಂತರ ಆಧಾರ್‌ ಸಂಖ್ಯೆಗೆ ಜೋಡಣೆ ಆಗಿರುವ ಮೊಬೈಲ್‌ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಬೇಕು. ಬಳಿಕ ರೈತನ ಜಮೀನಿನ ವಿವರ ಬರುತ್ತದೆ. ಅಲ್ಲಿ ಮೊಬೈಲ್‌ ಸಂಖ್ಯೆ ಹಾಕಿ ಸಕ್ರಿಯಗೊಳಿಸಿದಾಗ ಮತ್ತೂಂದು ಒಟಿಪಿ ಬರುತ್ತದೆ. ಅದನ್ನು ನಮೂದಿಸಿದಾಗ ಡೌನ್‌ಲೋಡ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ನೀವು ಜಮೀನಿನಿಂದ ಹೊರಗಿದ್ದೀರಿ!
ಮೊಬೈಲ್‌ಗೆ ಬಂದ ಒಟಿಪಿ ಅನ್ನು ಆ್ಯಪ್‌ನ ಸೂಚಿತ ಸ್ಥಳದಲ್ಲಿ ನಮೂದಿಸಿದ ಬಳಿಕ ಮುಂದಿನ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ರೈತರ ಪಹಣಿ ಸಂಖ್ಯೆಯನ್ನು ಕ್ಲಿಕ್‌ ಮಾಡಬೇಕು. ಇಷ್ಟು ಪ್ರಕ್ರಿಯೆಯನ್ನು ಜಮೀನಿನ ಒಳಗೆ ಅಥವಾ ಹೊರಗೂ ಮಾಡಬಹುದು. ಪಹಣಿ ಸಂಖ್ಯೆ ಕ್ಲಿಕಿಸಿದ ಬಳಿಕ ಗ್ರಾಮ ನಕ್ಷೆ ತೆರೆದ ಮೇಲೆ ಬರುವ ನಿಯಮಗಳೇ ಸವಾಲಿನದ್ದು. ಬೆಳೆ ಸಮೀಕ್ಷೆ ನಡೆಸಲು ಜಿಪಿಎಸ್‌ ನಿಖರತೆ 30 ಮೀಟರ್‌ಗಿಂತ ಕಡಿಮೆ ಇರಬೇಕು ಮತ್ತು ಸರ್ವೆ ನಂಬರ್‌ನ ಗಡಿ ರೇಖೆಯೊಳಗೆ ಇರಬೇಕು ಎಂದಿದೆ.

ಹೀಗಾಗಿ ಇಡೀ ಜಮೀನಿನಲ್ಲಿ ಸುತ್ತಾಟ ನಡೆಸಿದರೂ ಕೆಲವರಿಗೆ ಬೆಳೆ ವಿವರ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಜಿಪಿಎಸ್‌ ನಿಖರತೆ 7 ಮೀಟರ್‌ ಒಳಗೆ ಇದ್ದು, ಬೆಳೆಯ ವಿವರ ದಾಖಲಿಸಿದರೂ ನೀವು ಸರ್ವೇ ನಂಬರ್‌ ಗಡಿ ರೇಖೆಯಿಂದ ಹೊರಗೆ ಇದ್ದೀರಿ ಎನ್ನುವ ಸಂದೇಶ ಬರುತ್ತದೆ. ಇದರಿಂದ ಬೆಳೆ ಮಾಹಿತಿಯನ್ನು ನೀಡಿ ಛಾಯಾಚಿತ್ರ ಸಹಿತ ದಾಖಲಿಸುವ ಹಂತಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೃಷಿಕ ಸುಳ್ಯದ ಶಫೀಕ್‌.

2020ರಿಂದ ರೈತರೇ ಬೆಳೆ ಮಾಹಿತಿ ಯನ್ನು ಛಾಯಾಚಿತ್ರ ಸಹಿತ ದಾಖಲಿಸಿ, ಅಪ್‌ಲೋಡ್‌ ಮಾಡಲು ಸರಕಾರ ಅನುಮತಿ ನೀಡಿತ್ತು. ವರ್ಷದಿಂದ ವರ್ಷಕ್ಕೆ ಆ್ಯಪ್‌ ಬಳಕೆ ವಿಧಾನ ಬದಲಾ ಯಿಸಲಾಗುತ್ತಿದೆ. ಕಳೆದ ವರ್ಷ ಏನೂ ಸಮಸ್ಯೆ ಇರಲಿಲ್ಲ ಎನ್ನುತ್ತಿದ್ದಾರೆ ರೈತರು.

Advertisement

ಪಿಆರ್‌ ಆ್ಯಪ್‌ನಲ್ಲೂ ಸಮಸ್ಯೆ
ಸಮೀಕ್ಷೆಗೆ ಪೂರಕವಾಗಿ ಪಿ.ಆರ್‌. ಮೊಬೈಲ್‌ ಆ್ಯಪ್‌ ಕೂಡ ಇದೆ. ರೈತರೇ ನೇರವಾಗಿ ಅಪ್‌ಲೋಡ್‌ ಮಾಡಲು ಸಾಧ್ಯವಾಗದಿದ್ದರೆ ತಾಲೂಕು ಆಡಳಿತ ಗ್ರಾಮವಾರು ನಿಯೋಜಿಸಿದ ಪಿಆರ್‌ಗಳು ಆಯಾ ಜಮೀನಿನ ಬೆಳೆ ಮಾಹಿತಿ ಕ್ರೋಢೀಕರಿಸಿ ಅಪ್‌ಲೋಡ್‌ ಮಾಡಬೇಕಿದೆ. ಆದರೆ ರೈತರ ಆ್ಯಪ್‌ಗಿಂತ ಹೆಚ್ಚಿನ ತಾಂತ್ರಿಕ ಸಮಸ್ಯೆ ಪಿಆರ್‌ ಆ್ಯಪ್‌ನಲ್ಲಿದೆ.

ದ.ಕ.ದಲ್ಲಿ ಹಿಸ್ಸಾ ಸಮಸ್ಯೆ
ರಾಜ್ಯದ ಉಳಿದ ಜಿಲ್ಲೆಗಳಿಗ ಹೋಲಿಸಿದರೆ ಹಿಸ್ಸಾ ಆಧಾರಿತ ಜಿಪಿಎಸ್‌ನಿಂದ ದ.ಕ.ಜಿಲ್ಲೆಗೆ ಸಮಸ್ಯೆ ಹೆಚ್ಚಿದೆ. ಇಲ್ಲಿ ಒಂದೊಂದು ಸರ್ವೆ ನಂಬರ್‌ಗಳಲ್ಲಿ ಹಲವು ಹಿಸ್ಸಾಗಳಿದ್ದು ಇಂತಹ ಸಮಸ್ಯೆ ಬೇರೆ ಜಿಲ್ಲೆಗಳಲ್ಲಿ ಇಲ್ಲ. ಹಿಸ್ಸಾ ಆಧಾರಿತ ಅಪ್‌ಲೋಡ್‌ ರೈತರಿಗೆ ಕಷ್ಟವಾಗುತ್ತಿದೆ. ಹಿಂದೆ ಸರ್ವೇ ನಂಬರ್‌ ಆಧಾರಿತ ಜಿಪಿಎಸ್‌ ಇದ್ದು, ಆಗ ಈ ಸಮಸ್ಯೆ ಇರಲಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಇನ್ನೂ ಕೆಲವೆಡೆ ಕಂದಾಯ ಇಲಾಖೆಯ ಗ್ರಾಮ ನಕ್ಷೆಗೂ, ಆ್ಯಪ್‌ನಲ್ಲಿ ದಾಖಲಿಸಿರುವ ನಕ್ಷೆಗಳಿಗೂ ಹೋಲಿಕೆಯಾಗದ ಕಾರಣ ಸಮೀಕ್ಷೆ ಆಗುತ್ತಿಲ್ಲ. ಇನ್ನೊಂದೆಡೆ ಮೋಡ, ಅರಣ್ಯ ಭೂಮಿ ಆಧಾರಿತ ಪ್ರದೇಶಗಳಲ್ಲಿ ಜಿಪಿಎಸ್‌ ಸಂಪರ್ಕ ಸಾಧ್ಯವಾಗುತ್ತಿಲ್ಲ.

8.7 ಶೇ.ಪ್ರಗತಿ
ಆ.15ಕ್ಕೆ ಮುಂಗಾರು ರೈತರ ಬೆಳೆ ಸಮೀಕ್ಷೆ ಆರಂಭಗೊಂಡಿದ್ದರೂ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಪ್ರಗತಿ ದಾಖಲಾದದ್ದು ಶೇ.8.7ರಷ್ಟು ಮಾತ್ರ. ಆ.31ರೊಳಗೆ ರೈತರಿಗೆ, ಸೆ. 30ರೊಳಗೆ ಪಿಆರ್‌ಗಳು ಮಾಡಲು ಅವಕಾಶ ಇದೆ. ಇನ್ನೂ ಒಂದು ತಿಂಗಳ ಕಾಲಾವಕಾಶ ಇದ್ದರೂ ಆ್ಯಪ್‌ ಸಮಸ್ಯೆ ಬಗೆಹರಿಯದಿದ್ದಲ್ಲಿ ಗುರಿ ತಲುಪುವುದು ಕಷ್ಟ.

“ಆ್ಯಪ್‌ಗ್ಳಲ್ಲಿ ಒಂದಷ್ಟು ತಾಂತ್ರಿಕ ಸಮಸ್ಯೆ ಇರುವುದು ನಿಜ. ಜತೆಗೆ ಹಿಸ್ಸಾ ಆಧಾರಿತವಾಗಿ ಜಿಪಿಎಸ್‌ ಮಾಡಬೇಕಿರುವುದರಿಂದ ರೈತರಿಗೆ ತೊಂದರೆ ಆಗಿರಬಹುದು. ಈ ಮಧ್ಯೆ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬೆಳೆ ಸಮೀಕ್ಷೆ ನಡೆಸುವ ಕಾರ್ಯ ನಡೆಯುತ್ತಿದೆ. ಒಟ್ಟು ಶೇಕಡಾವಾರು ಪ್ರಗತಿ ಪ್ರಮಾಣ ಕೊಂಚ ಇಳಿಕೆ ಕಂಡಿದ್ದರೂ ಅದು ವೇಗ ಪಡೆಯಲಿದೆ. ರಾಜ್ಯದಲ್ಲಿ ರೈತರೇ ಸ್ವಯಂಪ್ರೇರಿತರಾಗಿ ಬೆಳೆ ಸಮೀಕ್ಷೆ ಮಾಡಿರುವುದಲ್ಲಿ ದ.ಕ.ಜಿಲ್ಲೆ ಮುಂಚೂಣಿಯಲ್ಲಿದೆ.”
– ಶಿವಶಂಕರ ದಾನೆಗೊಂಡರ್‌ ಪ್ರಭಾರ ಜಂಟಿ ನಿರ್ದೇಶಕ ಕೃಷಿ ಇಲಾಖೆ, ದ.ಕ.

 

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.