Advertisement
ಬಿ.ಸಿ.ರೋಡ್ ದಿನೇ ದಿನೇ ಬೆಳೆಯುತ್ತಿರುವ ಪರಿಣಾಮ ನಗರಕ್ಕೆ ಬರುವ ಜನರ ಜತೆಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪಾರ್ಕಿಂಗ್ ಸಮಸ್ಯೆಯೂ ಇದೆ. ಈ ನಡುವೆ ಫ್ಲೈಓವರ್ ತಳ ಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳು ಕುಳಿತುಕೊಳ್ಳುವುದರಿಂದ ವಾಹನಗಳ ನಿಲುಗಡೆಗೂ ತೊಂದರೆಯಾಗುತ್ತದೆ. ರವಿವಾರ ಬಂತೆಂದರೆ ಸಾಕು ಮೂವತ್ತಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಫ್ಲೈಓವರ್ ತಳ ಭಾಗದುದ್ದಕ್ಕೂ ಕೂತು ವ್ಯಾಪಾರ ಮಾಡುತ್ತಿರುತ್ತಾರೆ.
Related Articles
Advertisement
ನಗರದಲ್ಲಿ ಬೀದಿ ಬದಿ ವ್ಯಾಪಾರ ನಡೆಯಲೇಬಾರದು ಎಂದು ಹೇಳು ವಂತಿಲ್ಲ. ಆದರೆ ಅವುಗಳಿಗೆ ಮೂಲ ಸೌಕರ್ಯದೊಂದಿಗೆ ಪ್ರತ್ಯೇಕ ವಲಯವನ್ನು ಗುರುತಿಸಿದಾಗ ನಗರದ ಸೌಂದರ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವ್ಯಾಪಾರಿಗಳಿಗೆ ಬೇಕಾದ ಶೌಚಾಲಯ, ನೀರಿನ ವ್ಯವಸ್ಥೆ, ಬೀದಿ ದೀಪ ಹೀಗೆ ಸಕಲ ಸೌಲಭ್ಯ ನೀಡಿದಾಗ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಇಲ್ಲಿ ಹಲವರಲ್ಲಿದೆ.
ನಗರದಲ್ಲಿ ಜಾಗದ ಕೊರತೆ
ನಗರದಲ್ಲಿ ವ್ಯಾಪಾರಿ ವಲಯ ಮಾಡುವುದಕ್ಕೆ ಜಾಗವೇ ಇಲ್ಲವಾಗಿದ್ದು, ಹಿಂದೆ ನಗರಕ್ಕಿಂತ ಕೊಂಚ ಹೊರ ಭಾಗದಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಅಲ್ಲಿ ವ್ಯಾಪಾರ ಆಗುವುದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಕೈಬಿಡಲಾಗಿದೆ. ಈ ಎಲ್ಲ ಕಾರಣಕ್ಕೆ ಪ್ರತ್ಯೇಕ ವಲಯ ಗುರುತಿಸುವುದು ಸಾಧ್ಯವಾಗಿಲ್ಲ.
–ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ
ಪುರಸಭೆಯಿಂದ ಗುರುತಿನ ಚೀಟಿ ವಿತರಣೆ
ಬಿ.ಸಿ.ರೋಡ್ ಪೇಟೆಯ ಜತೆಗೆ ಬಂಟ್ವಾಳ ಪೇಟೆ, ಪಾಣೆಮಂಗಳೂರು, ಕೈಕಂಬ, ಬಂಟ್ವಾಳ ಬೈಪಾಸ್, ಮೆಲ್ಕಾರ್ ಮೊದಲಾದ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಕಾಣಬಹುದು. ಅದರಲ್ಲೂ ಬಿ.ಸಿ.ರೋಡ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿ ದಿನೇ ದಿನೆ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಏರುತ್ತಲೇ ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ. ಈ ಹಿಂದೆ ಪುರಸಭೆಯು ಒಟ್ಟು 72 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಮಾಡಿದೆ.