ಬೆಂಗಳೂರು:ಪರಭಾಷಾ ಚಿತ್ರಗಳ ಡಬ್ಬಿಂಗ್ ವಿರೋಧಿಸಿ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗದ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಟರಾದ ದೇವರಾಜ್, ಜಗ್ಗೇಶ್, ಬುಲೆಟ್ ಪ್ರಕಾಶ್, ಸೃಜನ್ ಲೋಕೇಶ್ ಸೇರಿದಂತೆ ಹಲವು ನಟ, ನಟಿಯರು ಭಾಗವಹಿಸಿದ್ದರು.
ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂಪಾರ್ಕ್ ವರೆಗೆ ಡಬ್ಬಿಂಗ್ ವಿರೋಧಿಸಿ ಮೆರವಣಿಗೆ ನಡೆಯಿತು.
ಡಬ್ಬಿಂಗ್ ವಿರೋಧಕ್ಕೆ ನನ್ನ ಬೆಂಬಲವಿದೆ. ಯಾರದ್ದೋ ಮಗುವಿಗೆ ಇನ್ನೊಬ್ಬರು ತಂದೆಯಾಗಬಾರದು. ಕನ್ನಡ ಚಿತ್ರರಂಗವನ್ನು ಉಳಿಸಿ, ಕನ್ನಡತನವನ್ನು ಬೆಳೆಸಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಬ್ಬಿಂಗ್ ವಿರೋಧಿ ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರಗಳು ರಾಜ್ಯದಲ್ಲಿ ಪ್ರದರ್ಶಿತವಾಗಬಾರದು. ಡಬ್ಬಿಂಗ್
ಚಿತ್ರ ಬಂದರೆ ಕನ್ನಡ ಚಿತ್ರೋದ್ಯಮ ನಂಬಿಕೊಂಡಿರುವ ಸಾವಿರಾರು ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆ ನಾಡಿನ ಚಿತ್ರಮಂದಿರಗಳು ಕೂಡ ಡಬ್ಬಿಂಗ್
ಚಲನಚಿತ್ರ ಪ್ರದರ್ಶನಕ್ಕೆ ಮುಂದಾಗಬಾರದು ಎಂದು ವಾಟಾಳ್ ನಾಗರಾಜ್ ಈ ಸಂದರ್ಭದಲ್ಲಿ ಹೇಳಿದರು.