ಮೈಸೂರು: ಅನ್ನಕೊಡುವ ಭೂಮಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ನೆಮ್ಮದಿಯಾಗಿ ಬದುಕಲು ನಾವೆಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಪತ್ರಕರ್ತರ ಸಂಘ, ರಾಜೀವ್ ಸ್ನೇಹ ಬಳಗ ಮತ್ತು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಭೂಮಿತಾಯಿಯನ್ನು ರಕ್ಷಿಸಿ -ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಎಂಬ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಉಳಿಸಿ: ಭೂಮಿಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಿಗೂ ಈ ಪರಿಸರವನ್ನು ವಿವೇಚನೆಯಿಂದ ಬಳಸಿಕೊಳ್ಳುವ ಜೊತೆಗೆ ಮುಂದಿನ ಪೀಳಿಗೆಗೆ ಯೋಗ್ಯ ಪರಿಸರ ಉಳಿಸುವುದು ಮಹತ್ತರ ಜವಾಬ್ದಾರಿ. ಪ್ರಕೃತಿಯ ಮಡಿಲಲ್ಲಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆ ನಿಟ್ಟಿನಲ್ಲಿ ವಿವಿಧ ಯೋಜನೆಗಳಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಮನೆಯಲಿ ಹಸಿರಿರಲಿ: ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಮಾತನಾಡಿ, ಹಚ್ಚ ಹಸಿರು ವಾತಾವರಣ-ಸುಖೀ ಜೀವನದ ಸೋಪಾನ ಎನ್ನುವ ಧ್ಯೇಯವಾಕ್ಯದಂತೆ ಪ್ರತಿಯೊಬ್ಬರೂ ತಮ್ಮ ಮನೆಗಳ ಆವರಣದಲ್ಲಿ ಗಿಡ ನೆಡಬೇಕು. ಪ್ರತಿ ಮನೆ ಹಸಿರಿನಿಂದ ಇರುವುದರಿಂದ ಶುದ್ಧ ಗಾಳಿ ಸೇವನೆ ಮಾಡಿ, ಭೂಮಿತಾಯಿಯನ್ನು ರಕ್ಷಿಸಿಕೊಂಡು ಪ್ರತಿಯೊಬ್ಬರೂ ಸಸ್ಯಾರಾಧನೆ ಮಾಡುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅನನ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಗೃತಿ ಮಾಹಿತಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಮಾತನಾಡಿ, ಪರಿಶುದ್ಧ ಗಾಳಿ ಪಡೆಯಲು ಒಬ್ಬ ವ್ಯಕ್ತಿ ಏಳು ಮರಗಳನ್ನು ಬೆಳೆಸಬೇಕು. ಪರಿಸರದ ಹೊಣೆ ಅರಿತು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ 700 ಸ್ವತ್ಛತಾ ಕಾರ್ಯಕ್ರಮಗಳು, 300 ಪರಿಸರ ಜಾಗೃತಿ ಮಾಹಿತಿ ಹಾಗೂ ಜಾಥಾ ಕಾರ್ಯಕ್ರಮ, 200 ಶಾಲೆಗಳಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿ, ನಮ್ಮ ಮನೆ, ನಮ್ಮ ಪರಿಸರ, ನಮ್ಮ ಸುತ್ತಮುತ್ತಲಿನ ವಾತಾವರಣದ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವಂತೆ ಡಾ.ವೀರೇಂದ್ರ ಹೆಗ್ಗಡೆಯವರು ಮಾಡಿದ್ದಾರೆ. ನಾಳಿನ ಮಕ್ಕಳ ಉಳಿವಿಗಾಗಿ ಪ್ರತಿಯೊಬ್ಬರು ಗಿಡ ಮರಗಳನ್ನು ಉಳಿಸಿ-ಬೆಳಸಬೇಕು ಎಂದರು.
ಜಾಗೃತಿಜಾಥಾ: ಇದೇ ವೇಳೆ ಭೂಮಿತಾಯಿಯನ್ನು ರಕ್ಷಿಸಿ-ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಪರಿಸರ ಜಾಥಾ ಕಾರ್ಯಕ್ರಮವನ್ನು ಹೆಬ್ಟಾಳದ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಅಭಿಷೇಕ್ ವೃತ್ತದವರೆಗೆ ಜಾಗೃತಿ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜಾಚಾರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಪಾಲಿಕೆ ಸದಸ್ಯ ಚೆಲುವೇಗೌಡ ಮೊದಲಾದವರು ಹಾಜರಿದ್ದರು.