Advertisement

ನಾಳೆಯಿಂದ ಜೆನ್‌ ಬೀಟಾ ತಲೆಮಾರಿನ ಯುಗ!

01:42 AM Dec 31, 2024 | Team Udayavani |

ಹೊಸದಿಲ್ಲಿ: ಸಮಾಜದಲ್ಲಿ “ಜೆನ್‌-ಝಡ್‌’ ತಲೆಮಾರಿನ ಬಗ್ಗೆಯೇ ಮಾತುಕತೆಗಳಾಗುತ್ತಿರುವ ನಡುವೆಯೇ 2025ರ ಜ. 1ರಿಂದ ಹುಟ್ಟುವ ಮಕ್ಕಳು ಹೊಸ ತಲೆಮಾರಿಗೆ ಸೇರಲಿದ್ದಾರೆ ಎಂದು ಸಮಾಜಶಾಸ್ತ್ರಜ್ಞರು ಹೇಳಿದ್ದಾರೆ. ಈ ತಲೆಮಾರನ್ನು “ಜೆನ್‌- ಬೀಟಾ’ ಹೆಸರಿನಿಂದ ಗುರುತಿಸಲಾಗುತ್ತದೆ.

Advertisement

2025ರಿಂದ 2039ರವರೆಗೆ ಹುಟ್ಟುವ ಮಕ್ಕಳು ಈ ತಲೆಮಾರಿಗೆ ಸೇರಲಿದ್ದು, ಇವರಲ್ಲಿ ಬಹುತೇಕರು 22ನೇ ಶತಮಾನದ ಆರಂಭವನ್ನು ನೋಡಲಿದ್ದಾರೆ ಎಂದು ಸಮಾಜ ಶಾಸ್ತ್ರಜ್ಞ ಮಾರ್ಕ್‌ ಮೆಕ್‌ಕ್ರಿಂಡಲ್‌ ಅವರು ಹೇಳಿದ್ದಾರೆ. ಅಲ್ಲದೆ ಮುಂದಿನ 10 ವರ್ಷದಲ್ಲಿ ಜೆನ್‌- ಬೀಟಾ ತಲೆಮಾರು ಜಗತ್ತಿನ ಜನಸಂಖ್ಯೆಯ ಶೇ.16ರಷ್ಟಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಲ್ಲಿಂದ ತಲೆಮಾರು ಲೆಕ್ಕಾಚಾರ ಆರಂಭ?
1925ರಿಂದ ಈ ತಲೆಮಾರು ಲೆಕ್ಕಚಾರವನ್ನು ಆರಂಭಿಸಲಾಗಿದ್ದು, 1925-45ರವರೆಗೆ ತಲೆಮಾರನ್ನು “ಬಿಲ್ಡರ್‌’, 1946- 64ರವರೆಗಿನ ತಲೆಮಾರನ್ನು “ಬೂಮರ್’, ಇದಾದ ಬಳಿಕ 1965-80 “ಜೆನ್‌-ಎಕ್ಸ್‌’, 1981-1994 “ಜೆನ್‌-ವೈ’, 1995-2009 “ಜೆನ್‌-ಝಡ್‌’, 2010-2024ರ ನಡುವಿನ ತಲೆಮಾರನ್ನು “ಜೆನ್‌ ಆಲ್ಫಾ’ ಎಂದು ಗುರುತಿಸಲಾಗುತ್ತದೆ.

ಹೊಸ ತಲೆಮಾರಿನ ಮಕ್ಕಳನ್ನು ಬೀಟಾ ಬೇಬೀಸ್‌ ಎಂದು ಗುರುತಿಸಲಿದ್ದು, ಇವರು ಯುವ ಜೆನ್‌-ವೈ ಮತ್ತು ಹಿರಿಯ ಜೆನ್‌-ಝಡ್‌ನ‌ ಮಕ್ಕಳಾಗಿರಲಿದ್ದಾರೆ ಎಂದು ಮೆಕ್‌ಕ್ರಿಂಡಲ್‌ ಹೇಳಿದ್ದಾರೆ.

ಎಐ ಜತೆಗೆ ಬೀಟಾ ಬೇಬಿ ಬೆಳವಣಿಗೆ
ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಜೆನ್‌- ಬೀಟಾ ತಲೆಮಾರಿನ ಮಕ್ಕಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜತೆಗೆ ಬೆಳವಣಿಗೆ ಹೊಂದಲಿದ್ದಾರೆ. ಈ ಮಕ್ಕಳ ಕಾಲದಲ್ಲಿ ಜೀವನದ ಪ್ರತಿಯೊಂದು ಘಳಿಗೆಯನ್ನು ಎಐ ವಶಪಡಿಸಿಕೊಳ್ಳಲಿದೆ. ಇವರ ಶಿಕ್ಷಣ, ಆರೋಗ್ಯ, ಕೆಲಸ ಎಲ್ಲವನ್ನೂ ಎಐ ನಿರ್ಧಾರ ಮಾಡಲಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next