Advertisement

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

10:42 PM Jan 03, 2025 | Team Udayavani |

ಕಾರವಾರ: ಆರು ದಶಕಗಳಿಂದ ವಿದ್ಯುತ್‌ ಉತ್ಪಾದಿಸಿ ರಾಜ್ಯದ ಬೆಳಕು ಹೆಚ್ಚಿಸಿದ ಕರ್ನಾಟಕ ಪವರ್‌ ಕಾರ್ಪೊರೇಶನ್‌ (ಕೆಪಿಸಿ) ವಿದ್ಯುತ್‌ ಉತ್ಪಾದನೆ ಮೂಲಕ ಲಾಭದಲ್ಲಿದ್ದರೂ ಬಾಕಿ ಹಣ ಬಾರದೆ ಸಂಕಷ್ಟಕ್ಕೆ ಸಿಲುಕಿದೆ.

Advertisement

ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಜಲ-ಗಾಳಿ-ಸೋಲಾರ್‌, ಥರ್ಮಲ್‌ ಘಟಕಗಳಿಂದ ಬೆಳಕು ನೀಡುತ್ತಿರುವ ಕೆಪಿಸಿ ಕೊಡುಗೆ ರಾಜ್ಯಕ್ಕೆ ದೊಡ್ಡದು. ಇಂತಹ ಸಂಸ್ಥೆಗೆ ಸರಕಾರದ ಅಧೀನದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) 30 ಸಾವಿರ ಕೋಟಿ ರೂ. ನೀಡಬೇಕಿದೆ.

ಇನ್ನು ಕೆಪಿಸಿಯಿಂದ ವಿದ್ಯುತ್‌ ಖರೀದಿಸಿ, ಮನೆ ಬಳಕೆ-ಕೈಗಾರಿಕೆಗಳಿಗೆ ಪೂರೈಸುವ ಕೆಪಿಟಿಸಿಎಲ್‌ಗೆ ಸಹ ಗ್ರಾ.ಪಂ.ಗಳು ಹಾಗೂ “ಗೃಹಜ್ಯೋತಿ’ ಯೋಜನೆಯಿಂದ 40 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಕೆಪಿಸಿಯಿಂದ 1.20 ರೂ.ಗೆ ಯುನಿಟ್‌ ವಿದ್ಯುತ್‌ ಖರೀದಿಸುವ ಕೆಪಿಟಿಸಿಎಲ್‌ ಮನೆ ಬಳಕೆ ವಿದ್ಯುತ್‌ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 3.40 ರೂ. ಹಾಗೂ ವಾಣಿಜ್ಯ ಉದ್ದೇಶ ವಿದ್ಯುತ್‌ ಬಳಕೆಗೆ ಪ್ರತಿ ಯುನಿಟ್‌ಗೆ 7 ರೂ.ನಂತೆ ದರ ವಿಧಿಸುತ್ತಿದೆ. ಆದರೆ ಗ್ರಾ.ಪಂ.ಗಳಿಂದ ಬಾಕಿ ವಸೂಲಿಯಲ್ಲಿ ಹಿಂದೆ ಬಿದ್ದಿದೆ. ಪರಿಣಾಮ ವಿದ್ಯುತ್‌ ಮಾರಾಟದಿಂದ ಕೆಪಿಸಿಗೆ ಬರಬೇಕಾದ ಬಾಕಿ ಹಾಗೆ ಉಳಿದಿದೆ.

ಹೀಗಾಗಿ ಹೊಸ ಯೋಜನೆ ಆರಂಭಿಸಲಾಗದೆ, ಈಗಿರುವ ಉತ್ಪಾದನಾ ಘಟಕಗಳನ್ನು ನವೀಕರಿಸಲಾಗದ ಸ್ಥಿತಿಗೆ ತಲುಪಿದೆ. ಇನ್ನು ಕಾಯಂ ನೌಕರರ ನೇಮಕಾತಿ ಪ್ರಕ್ರಿಯೆಯನ್ನು 2 ದಶಕಗಳಿಂದ ನಿಲ್ಲಿಸಿದೆ. ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬಂದಿಯಿಂದಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ. ಈ ಮಧ್ಯೆ ಕೆಪಿಸಿ ಹಾಗೂ ಕೆಪಿಟಿಸಿಎಲ್‌ ವಿಲೀನದ ಮಾತೂ ಕೇಳಿಬಂದಿದೆ.

ವೈಭವದ ದಿನಗಳು
ಕಾಳಿ ನದಿಗೆ ಸುಪಾ ಅಣೆಕಟ್ಟು, ಅಂಬಿಕಾ ನಗರದ ನಾಗಝರಿ ಪವರ್‌ ಹೌಸ್‌, ಕೊಡಸಳ್ಳಿ, ಕದ್ರಾದಲ್ಲಿ ಕಟ್ಟಿದ ಅಣೆಕಟ್ಟು ಜತೆಗಿನ ವಿದ್ಯುತ್‌ ಉತ್ಪಾದನ ಘಟಕಗಳಿಂದ ಕೆಪಿಸಿ ರಾಜ್ಯದ ಬೇಡಿಕೆಗೆ ತಕ್ಕಂತೆ ಪ್ರತಿದಿನ 1 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ.

Advertisement

ಕ್ರಸ್ಟ್‌ಗೇಟ್‌ ಸುಭದ್ರ
ಕಾಳಿ ನದಿಯ ಎಲ್ಲ ಡ್ಯಾಂಗಳ ಕ್ರಸ್ಟ್‌ಗೇಟ್‌ಗಳು ಸುಭದ್ರವಾಗಿವೆ. ತುಂಗಭದ್ರಾ ಅಣೆಕಟ್ಟು ಅವಘಡದ ಅನಂತರ ತಜ್ಞರ ಸಮಿತಿ ಸುಪಾ ಅಣೆಕಟ್ಟು ಕ್ರಸ್ಟ್‌ಗೇಟ್‌ನ ಪರೀಕ್ಷೆ ನಡೆಸಿ ಗುಣಮಟ್ಟದ ಪ್ರಮಾಣಪತ್ರ ನೀಡಿದೆ. ನಾಗಝರಿ ವಿದ್ಯುತ್‌ ಉತ್ಪಾದನ ಘಟಕ-2 ರ ನವೀಕರಣ ಆರಂಭವಾಗಿದೆ. ಬಿಎಚ್‌ಇಎಲ್‌ ಸಂಸ್ಥೆ ಟಬೈನ್‌ ಬದಲಿಸುವ ಗುತ್ತಿಗೆ ಪಡೆದುಕೊಂಡಿದೆ. ಹಂತ-ಹಂತವಾಗಿ ಎಲ್ಲ ಟಬೈನ್‌ ನವೀಕರಣದ ಉದ್ದೇಶ ಹೊಂದಲಾಗಿದೆ. ಹೀಗಿರುವಾಗ ಸರಕಾರ ಕೆಪಿಸಿಯನ್ನು ಕೆಪಿಟಿಸಿಎಲ್‌ನಲ್ಲಿ ವಿಲೀನ ಮಾಡುತ್ತದೆಯೋ ಅಥವಾ ಕೆಪಿಸಿಗೆ ನೀಡಬೇಕಾದ ಬಾಕಿ 30 ಸಾವಿರ ಕೋಟಿ ರೂ. ಕೊಡಿಸಿ, ನಿಗಮವನ್ನು ಬಲಪಡಿಸಿ ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತದೆಯೋ ಕಾದು ನೋಡಬೇಕಿದೆ.

ಬಾಕಿ ಉಳಿದಿದ್ದು ಯಾಕೆ?
– ಮನೆಬಳಕೆ, ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಸುವ ಕೆಪಿಟಿಸಿಎಲ್‌ಗೆ ಗ್ರಾ.ಪಂ.ಗಳು, “ಗೃಹಜ್ಯೋತಿ’ ಯೋಜನೆಯಿಂದ ಬಾರದ ಹಣ.
-ಗ್ರಾ.ಪಂ.ಗಳೂ ಬಾಕಿ ವಸೂಲಿಯಲ್ಲಿ ಹಿಂದೆ ಬಿದ್ದ ಪರಿಣಾಮ ವಿದ್ಯುತ್‌ ಮಾರಾಟದಿಂದ ಕೆಪಿಸಿಗೆ ಬರಬೇಕಾದ ಬಾಕಿ ಹಾಗೆ ಉಳಿದಿದೆ. ಹೀಗಾಗಿ ಹೊಸ ಯೋಜನೆ ಆರಂಭಿಸಲಾಗದೆ, ಈಗಿರುವ ಉತ್ಪಾದನಾ ಘಟಕಗಳನ್ನು ನವೀಕರಿಸಲಾಗದ ಸ್ಥಿತಿ.

ಅಣೆಕಟ್ಟುಗಳಲ್ಲಿ ಉತ್ತಮ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಮೇ ಅನಂತರವೂ ಒಂದೆರಡು ತಿಂಗಳು ವಿದ್ಯುತ್‌ ಉತ್ಪಾದನ ಸಾಮರ್ಥ್ಯ ಉತ್ತರ ಕನ್ನಡದ ಜಲ ವಿದ್ಯುತ್‌ ಘಟಕಗಳಿಗಿದೆ.
-ಶ್ರೀಧರ ಕೋರಿ,
ಮುಖ್ಯ ಎಂಜಿನಿಯರ್‌ ಕೆಪಿಸಿ, ಕದ್ರಾ-ಕೊಡಸಳ್ಳಿ.

-ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next