ಮಹದೇವಪುರ: ಬೆಂಗಳೂರು ನಗರದ ತ್ಯಾಜ್ಯವನ್ನು ಇಲ್ಲಿನ ಮೀಟಗಾನಹಳ್ಳಿ ಬಳಿ ಇರುವ ಕಲ್ಲು ಕ್ವಾರಿಗಳಲ್ಲಿ ಅವೈಜ್ಞಾನಿಕವಾಗಿ ಸುರಿಯುತ್ತಿದ್ದು, ಈ ತ್ಯಾಜ್ಯದಿಂದ ಉತ್ಪತ್ತಿಯಾಗುತ್ತಿರುವ ದ್ರವ ರೂಪದ ಅಪಾಯಕಾರಿ ಕೊಳಚೆ (ಲಿಚೆಡ್) ಕಣ್ಣೂರು ಕೆರೆ ಸೇರಿ, ಕೆರೆ ನೀರು ಕಲುಷಿತಗೊಂಡಿದೆ. ಜತೆಗೆ ಸುತ್ತಮುತ್ತ ಅಂತರ್ಜಲ ಕೂಡ ಕೊಳಕಾಗುತ್ತಿದೆ.
ಆರಂಭದಿಂದಲೂ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ, ಸಾರ್ವಜನಿಕರ ಕಣ್ತಪ್ಪಿಸಿ ತ್ಯಾಜ್ಯ ತಂದು ಸುರಿದಿರುವ ಪಾಲಿಕೆ ಅಧಿಕಾರಿಗಳು, ಸಮಸ್ಯೆ ತೀವ್ರಗೊಂಡಿದ್ದರೂ ಪರಿಹರಿಸಲು ಗಮನಹರಿಸದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುತ್ತಮುತ್ತಲ ಗ್ರಾಮಸ್ಥರು, ಪಾಲಿಕೆ ವಿರುದ್ಧ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
ಹೊಸೂರುಬಂಡೆ ಗ್ರಾಮದ ಕಡೆಯಿರುವ ಕಲ್ಲು ಕ್ವಾರಿಗಳ ತಳದಲ್ಲಿ ಮ್ಯಾಟ್ (ಟಾರ್ಪಲ್) ಹಾಕದೇ ಕಸ ಸುರಿಯಲಾಗುತ್ತಿದೆ. ಹೀಗಾಗಿ ಅಪಾಯಕಾರಿ ಕೊಳಚೆ, ಪಕ್ಕದಲ್ಲೇ ಇರುವ ಕಣ್ಣೂರು ಕೆರೆ ಸೇರುತ್ತಿದೆ. ಈ ಭಾಗದಲ್ಲಿ ಕೃಷಿಗೆ ಆಧಾರವಾಗಿದ್ದ ಕೆರೆ, ಪ್ರಸ್ತುತ ಮಲಿನಗೊಂಡಿದೆ. ದನಕರುಗಳು ಕೆರೆ ನೀರು ಕುಡಿಯದಂತಹ ಪರಿಸ್ಥಿತಿಯಿದ್ದರೂ ಬಿಬಿಎಂಪಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ವಾರಿಯಲ್ಲಿ 75 ಲೋಡ್ ತ್ಯಾಜ್ಯ ಮಾತ್ರ ಸುರಿಯುವುದಾಗಿ ಹೇಳಿದ್ದ ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯರ ಕಣ್ತಪ್ಪಿಸಿ 350ಕ್ಕೂ ಹೆಚ್ಚು ಲಾರಿ ಲೋಡ್ ತ್ಯಾಜ್ಯ ಸುರಿದಿದ್ದಾರೆ. ಈ ಮೂಲಕ ಪಾಲಿಕೆ ಅಧಿಕಾರಿಗಳು ಕಣ್ಣೂರು ಸುತ್ತಮುತ್ತಲ ಗ್ರಾಮಗಳ ಜನರ ಜೀವನದೊಂದಿಗೆ ಆಟವಾಡುತ್ತಿದ್ದಾರೆ ಎಂದು ತಾ.ಪಂ ಮಾಜಿ ಉಪಧ್ಯಕ್ಷೆ ಲಕ್ಷ್ಮಮ್ಮ ನಂಜೇಗೌಡ ದೂರಿದ್ದಾರೆ.
ಕಾಟಾಚಾರಕ್ಕೆ ಔಷಧ ಸಿಂಪಡಣೆ: ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಜತೆಗೆ, ದುರ್ವಾಸನೆ ಹರಡದಂತೆ ಔಷಧ ಸಿಂಪಡಿಸುವುದಾಗಿ ಹೇಳಿದ್ದ ಬಿಬಿಎಂಪಿ, ಕಣ್ಣೂರು ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸುವವರೆಗೂ ಒಮ್ಮೆ ಕೂಡ ಔಷಧ ಸಿಂಪಡಿಸಿರಲಿಲ್ಲ. ಪ್ರತಿಭಟನೆ ನಂತರ ಕಾಟಾಚಾರಕ್ಕೆ ಔಷಧ ಸಿಂಪಡಿಸಲಾಗುತ್ತಿದೆ. ಪರಿಣಾಮ ಸುತ್ತಲ ವಾತವರಣ ಕಲುಷಿತಗೊಂಡು, ದುರ್ವಾಸನೆ ಹೆಚ್ಚಾಗಿದೆ. ಸೊಳ್ಳೆ, ನೊಣಗಳೂ ಹೆಚ್ಚಿ, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ಲಕ್ಷ್ಮಮ್ಮ ಆತಂಕ ವ್ಯಕ್ತಪಡಿಸಿದರು.
ಕೆರೆ ನೀರು ಮಲಿನಗೊಂಡಿರುವ ಕಾರಣ, ಕಣ್ಣೂರು, ಹೂಸೂರು ಬಂಡೆ, ಕಾಡುಸೊಣಪ್ಪನಹಳ್ಳಿ, ಮೀಟಗಾನಹಳ್ಳಿ ಹಾಗೂ ಬೆಳ್ಳಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಒಂದು ವಾರದೊಳಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ, ಕ್ವಾರಿ ಸುತ್ತಲ ಎಲ್ಲ ಹಳ್ಳಿಗಳ ಗ್ರಾಮಸ್ಥರು ಪಾಲಿಕೆ ವಿರುದ್ಧ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.