Advertisement

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

12:42 PM Nov 16, 2024 | Team Udayavani |

ಕಲಬುರಗಿ: ಮಹಾನಗರದಲ್ಲಿ ಸಂಗ್ರಹಿಸಲಾದ ಕಸವನ್ನು ಸರಿಯಾಗಿ ವಿಲೇವಾರಿ ಮಾಡದ ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆ ವಿರುದ್ದ ಕರ್ನಾಟಕ ಲೋಕಾಯುಕ್ತ ಸ್ವಯಂ ಮೊಕದ್ದಮೆ ದಾಖಲಿಸಲು ಮುಂದಾಗಿದೆ.

Advertisement

ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ಕಸ ತ್ಯಾಜ್ಯ ಸಂಗ್ರಹದ ಘಟಕ ಸ್ಥಳಕ್ಕೆ ಭೇಟಿ ನೀಡಿ, ಕಳೆದ 13 ವರ್ಷಗಳಿಂದ ಘನತ್ಯಾಜ್ಯ ವಿಲೇವಾರಿ ಮಾಡದೆ ಹಾಗೆಯೇ ಗುಡ್ಡದ ರಾಶಿ ಹಾಕಿರುವುದನ್ನು ಕಂಡು ಗಾಬರಿಯಾದರಲ್ಲದೆ, “ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ವಿಷದ ಗುಡ್ಡೆ ತಯಾರು ಮಾಡಿದ್ದೀರಿ, ಇದರಿಂದ ಸುತ್ತಮುತ್ತಲು ಎಷ್ಟೊಂದು ಪ್ರಮಾಣದಲ್ಲಿ ಹಾನಿಯಾಗುತ್ತಿದೆ ಎಂಬುದು ನಿಮಗೇನು ಗೊತ್ತು” ಎಂದು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅದೇ ತೆರನಾಗಿ 16 ಕೋ.ರೂ ವೆಚ್ಚದಲ್ಲಿ ಘನ ತ್ಯಾಜ್ಯದಿಂದ ಗೊಬ್ಬರ ನಿರ್ಮಾಣ ಘಟಕದ ಶೆಡ್ ಅತ್ಯಂತ ಕಳಪೆಯಿಂದ ಕೂಡಿದ್ದರಿಂದ ಜೋರಾದ ಗಾಳಿಗೆ ಬಿದ್ದು ಹೋಗಿರುವುದರ ವಿರುದ್ದವೂ ಸಹ ಸ್ವಯಂ ಪ್ರಕರಣ ದಾಖಲಿಸಲು ವರದಿ ರೂಪಿಸುವಂತೆ ಉಪಲೋಕಾಯುಕ್ತರು ಸ್ಥಳದಲ್ಲಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ ಅವರಿಗೆ ಸೂಚಿಸಿದರು.

ಸ್ಥಳದಲ್ಲಿದ್ದ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ ಪಾಟೀಲ್ ಅವರು ಕಸ ವಿಲೇವಾರಿ ಮಾಡಲು ಎರಡು ಸಲ ಟೆಂಡರ್ ಕರೆದರೂ ಅಂತಿಮವಾಗಿಲ್ಲ. ಈಗ ಶಾರ್ಟ್ ಟರ್ಮ್ ಟೆಂಡರ್ ಕರೆದು ಅಂತಿಮಗೊಳಿಸಿ ಆರು ತಿಂಗಳೊಳಗೆ ತಾಜ್ಯದ ರಾಶಿಯನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

Advertisement

ಇದಕ್ಕೆ ಲೋಕಾಯುಕ್ತರು ಆರು ತಿಂಗಳು ಕಾಲಾವಧಿ ಬೇಡ.‌ ಬೇಗ ಕೆಲಸ ಮುಗಿಸಿ ಎಂದರು.‌

ತದನಂತರ ಪತ್ರಕರ್ತರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತ ನ್ಯಾ ಬಿ. ವೀರಪ್ಪ ಅವರು, ತ್ಯಾಜ್ಯ ವಿಲೇವಾರಿ ಮಾಡದ ಹಾಗೂ ಕಳಪೆ ಶೆಡ್ ನಿರ್ಮಾಣ ಮಾಡಿದ್ದರೂ ಕ್ರಮ‌ಕೈಗೊಳ್ಳದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದೆ ಎಂದು ಸ್ಪಷ್ಟ ಪಡಿಸಿದರು

ಇದಕ್ಕೂ ಮುಂಚೆ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಕೈದಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಏನೋ ಕೆಟ್ಟ ಘಳಿಗೆಯಲ್ಲಿ ತಪ್ಪು ಮಾಡಿ ಇಲ್ಲಿಗೆ ಬಂದಿದ್ದೀರಿ.‌ ಆದರೆ ಹೊರಗೆ ಬರುವಾಗ ಪರಿವರ್ತನೆ ಹೊಂದಿ ಬನ್ನಿ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಉಪ ಲೋಕಾಯುಕ್ತರು ಕೈದಿಗಳಿಗೆ ತಯಾರಿಸಿದ ಅಡುಗೆ ಪರೀಕ್ಷಿಸಿದರು.‌ ಅದೇ ರೀತಿ ಮಹಿಳಾ ಕೈದಿಗಳು ತಯಾರಿಸಿದ ಕರಕುಶಲ ಸಾಮಾಗ್ರಿಗಳನ್ನು ಅವಲೋಕಿಸಿದರು.

ಬಿಡುಗಡೆಗೆ ಪರಿಶೀಲನಾ ಅರ್ಜಿ: ವರದಕ್ಷಿಣೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಮೂರು ವರ್ಷ ಶಿಕ್ಷೆಗೆ ಒಳಗಾಗಿ ಕಾರಾಗೃಹದಲ್ಲಿ ಬಂಧಿಯಾಗಿರುವ 93 ವರ್ಷದ ಜೇವರ್ಗಿ ತಾಲೂಕಿನ ನಾಗಮ್ಮ ಹಾಸಿಗೆಯಲ್ಲೇ ಪರಾವಲಂಬಿಯಾಗಿದ್ದನ್ನು ಕಂಡ ಲೋಕಾಯುಕ್ತರು, ಆರೋಗ್ಯದ ದುಸ್ಥಿತಿ ವರದಿಯನ್ನು ಫೋಟೋ ಸಮೇತ ಸುಪ್ರೀಂ ಕೋರ್ಟ್ ಗೆ ಪರಿಶೀಲನಾ ಅರ್ಜಿ ಸಲ್ಲಿಸಿ ಮಾನವತೆ ನಿಟ್ಟಿನಲ್ಲಿ ಬಿಡುಗಡೆಗೆ ಯತ್ನಿಸಲಾಗುವುದು ಎಂದು ಉಪ ಲೋಕಾಯುಕ್ತರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜೈಲ್ ಅಧೀಕ್ಷಕಿ ಅನೀತಾ, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ  ಶ್ರೀನಿವಾಸ ನವಲೆ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next