Advertisement

ತಮ್ಮಿಂದ ತೊಂದರೆಯಾಗಿದೆ ಎಂದರೆ ಚಿತ್ರರಂಗ ಬಿಡುತ್ತೇನೆ ಶಿವರಾಜಕುಮಾರ್

11:25 AM Jan 04, 2017 | |

14 ವರ್ಷಗಳ ಹಿಂದೆ ಇನ್ನು ರೀಮೇಕ್‌ ಮಾಡುವುದಿಲ್ಲ ಎಂದು ಶಿವರಾಜಕುಮಾರ್ ಘೋಷಿಸಿದ್ದರು. ಅದರಂತೆ ಅವರು ರೀಮೇಕ್‌ ಚಿತ್ರಗಳಿಂದ ದೂರವೇ ಇದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಶಿವರಾಜಕುಮಾರ್‌ ಅವರು ರೀಮೇಕ್‌ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದ್ದೇ ಇತ್ತು. ಈ ಕುರಿತು ಶಿವರಾಜಕುಮಾರ್‌ ಅವರು ತಮ್ಮ ಹೇಳಿಕೆ ನೀಡಿರಲಿಲ್ಲ.

Advertisement

ಈಗ ಖುದ್ದು ಶಿವರಾಜ ಕುಮಾರ್‌ ತಾವು ರೀಮೇಕ್‌ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಯಾಕೆ ನಟಿಸುತ್ತಿರುವದಾಗಿಯೂ ಹೇಳಿದ್ದಾರೆ. ಇತ್ತೀಚೆಗೆ ನಡೆದ “ಶ್ರೀಕಂಠ’ ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಶಿವರಾಜಕುಮಾರ್‌ ಅವರು ರೀಮೇಕ್‌ ಬಗ್ಗೆ, ಕಳೆದ ವರ್ಷದ ಬಗ್ಗೆ, ಕಲಾವಿದರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತಾಡಿದ್ದಾರೆ.

* “ಒಪ್ಪಂ’ ಸಿನಿಮಾದ ರೀಮೇಕ್‌ನಲ್ಲಿ ನಟಿಸುತ್ತಿದ್ದೀರಂತೆ?
-ಹೌದು, ಆ ಸಿನಿಮಾ ನೋಡಿದೆ. ತುಂಬಾ ಇಷ್ಟವಾಯಿತು. ಹೃದಯಕ್ಕೆ ಹತ್ತಿರವಾದ ಸಿನಿಮಾವನ್ನು ಮಾಡೋದು ತಪ್ಪಲ್ಲ. ಆ ಮೂಲಕ ನಾನೂ ಮತ್ತಷ್ಟು ಹೃದಯಗಳಿಗೆ ಹತ್ತಿರವಾಗಬಹುದು. ಇದ್ದ ಬದ್ದ ಸಿನಿಮಾಗಳನ್ನೆಲ್ಲಾ ನಾನು ರೀಮೇಕ್‌ ಮಾಡುತ್ತಿಲ್ಲ. ತೀರಾ ಅಪರೂಪ ಎನಿಸಿದ, ಖುಷಿಕೊಟ್ಟ ಸಿನಿಮಾಗಳನ್ನು ಮಾಡುವುದು ತಪ್ಪಲ್ಲ. ಅಷ್ಟಕ್ಕೂ ನಾನು ರೀಮೇಕ್‌ನಲ್ಲಿ ನಟಿಸುತ್ತಿದೇನೆ. ಕ್ರೈಮ್‌ ಮಾಡ್ತಿಲ್ಲ.

* 2016 ಹೇಗಿತ್ತು. 2017 ರ ನಿರೀಕ್ಷೆ ಏನು?
-2016 ನನ್ನ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದ ಮೂಲಕ ಆರಂಭವಾಯಿತು. ಆ ನಂತರ ಬಂದ “ಶಿವಲಿಂಗ’ ಹಾಗೂ “ಕಬೀರ’ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾಯಿತು. ಈ ವರ್ಷ “ಶ್ರೀಕಂಠ’ ಮೂಲಕ ಆರಂಭವಾಗುತ್ತಿದೆ. ಈ ವರ್ಷವೂ ಚೆನ್ನಾಗಿರುತ್ತದೆ ಎಂಬ ವಿಶ್ವಾಸವಿದೆ. “ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ’, “ಲೀಡರ್‌’, “ಟಗರು’ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿದೆ.

* ನಾಯಕ ನಟರು ಕಿರುತೆರೆಯಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸಾಕಷ್ಟು ತಕರಾರು ನಡೆಯುತ್ತಿದೆ. ಈ ಬಗ್ಗೆ ಏನಂತೀರಿ?
-ಅದು ಅರ್ಥವಿಲ್ಲದ ಮಾತು. ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಜವಾಬ್ದಾರಿಗಳಿವೆ. ಅದನ್ನು ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಈಗ ನಾನು ಸೇರಿದಂತೆ ಅನೇಕ ನಟರು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಂತ ಅವರ ಸಿನಿಮಾ ಕೆಲಸಕ್ಕೆ ಯಾವತ್ತೂ ತೊಂದರೆಕೊಟ್ಟಿಲ್ಲ. ನಿರ್ಮಾಪಕರು ಕರೆದಾಗ ಬಂದಿದ್ದಾರೆ. ತಮ್ಮ ಸಿನಿಮಾವನ್ನು ಎಷ್ಟು ಪ್ರಮೋಶನ್‌ ಮಾಡಬೇಕೋ ಅಷ್ಟು ಮಾಡುತ್ತಾರೆ. ಯಾರಾದರೂ ನಿರ್ಮಾಪಕರು ಬಂದು ನಮ್ಮಿಂದ ತೊಂದರೆಯಾಗಿದೆ ಎನ್ನಲಿ ನಾನು ಚಿತ್ರರಂಗ ಬಿಟ್ಟುಬಿಡುತ್ತೇನೆ. ಸುಖಾಸುಮ್ಮನೆ ತಕರಾರು ಮಾಡುವುದರಲ್ಲಿ ಅರ್ಥವಿಲ್ಲ. 

Advertisement

* ಈ ವಾರ ಬಿಡುಗಡೆಯಾಗುತ್ತಿರುವ “ಶ್ರೀಕಂಠ’ದ ಸ್ಪೆಷಲಾಟಿ ಏನು?
-ಇದೊಂದು ಹೊಸ ತರಹದ ಕಥೆ. ನಿರ್ದೇಶಕ ಮಂಜು ಸ್ವರಾಜ್‌ ವಿಭಿನ್ನವಾಗಿ ನಿರೂಪಿಸಿದ್ದಾರೆ. ಕಾಮನ್‌ಮ್ಯಾನ್‌ ಕುರಿತಾದ ಸಿನಿಮಾ. ತನಗೆ ಬರುವ ಸಮಸ್ಯೆಗಳನ್ನು ಒಬ್ಬ ಕಾಮನ್‌ಮ್ಯಾನ್‌ ಹೇಗೆ ಎದುರಿಸುತ್ತಾನೆಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ನಿರ್ಮಾಪಕ ಮನುಗೌಡ ಅವರು ತುಂಬಾ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

* ಚಿತ್ರದ ರೈಲು ಸಾಹಸ ಹಾಗೂ ಕಟೌಟ್‌ ಹತ್ತಿರುವ ಬಗ್ಗೆ ಹೇಳಿ?
-ರೈಲು ಸಾಹಸವನ್ನು ನಾನು ಈ ಹಿಂದೆ “ಜೋಡಿ’ ಹಾಗೂ “ಪ್ರೀತ್ಸೆ’ ಸಿನಿಮಾದಲ್ಲಿ ಮಾಡಿದ್ದೆ. ಈಗ “ಶ್ರೀಕಂಠ’ದಲ್ಲೂ ಮಾಡಿದ್ದೇನೆ. ಪಕ್ಕಾ ಪ್ಲಾನಿಂಗ್‌, ವೀಲ್‌ ಪವರ್‌ನಿಂದ ಅದು ಮಾಡಲು ಸಾಧ್ಯ. ಇನ್ನು, ಕಟೌಟ್‌ ಹತ್ತುವ ದೃಶ್ಯಕ್ಕೆ ರೋಪ್‌ ಎಲ್ಲಾ ತಂದಿದ್ದರು. ಆದರೆ ನಾನು ಹಾಗೇ ಹತ್ತಿದೆ. ಅಭಿಮಾನಿಗಳು ನಮ್ಮ ಕಟೌಟ್‌ಗೆ ಹತ್ತಿ ಹಾರ, ಹಾಲು ಹಾಕುತ್ತಾರೆ. ಆ ಅನುಭವ ಹೇಗಿರುತ್ತದೆಂಬುದನ್ನು ತಿಳಿಯಲು ನಾನೂ ಹತ್ತಿದೆ. ಮನಸ್ಸಿನಲ್ಲಿ ಪ್ರೀತಿ, ಅಭಿಮಾನ ಇದ್ದರೆ ಎಲ್ಲವೂ ಸುಲಭ ಎಂದು ನನಗೆ ಆಗ ಅನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next