ಮಲ್ಪೆ: ಪ್ರತಿಯೊಬ್ಬರ ಸರ್ವತೋಮುಖ ಅಭಿವೃದ್ದಿಗೆ ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿಯಾಗಿದೆ. ಎಲ್ಲರ ಜೀವನದಲ್ಲೂ ಶಿಕ್ಷಣ ಮಹತ್ವದ ಪಾತ್ರ ವಹಿಸಲಿದ್ದು, ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಶ್ರಮಿಸಬೇಕು ಎಂದು ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನುಡಿದರು.
ಶುಕ್ರವಾರ ಕಿದಿಯೂರು ಶ್ರೀ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯ ಸುವರ್ಣ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಉದ್ಯಮಿ ನಾಡೋಜ ಡಾ| ಜಿ. ಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು. ಊರಿನ ದೇವಸ್ಥಾನಗಳಂತೆ ಅತಿ ಪ್ರಮುಖ್ಯವಾದ ಜ್ಞಾನ ದೇಗುಲವಾದ ವಿದ್ಯಾ ದೇಗುಲ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅರ್ಚಕ ಹಿರೆಮಗಳೂರು ಕಣ್ಣನ್, ಮಣಿಪಾಲ ಮಾಹೆ ರಿಜಿಸ್ಟ್ರಾರ್ ಡಾ| ನಾರಾಯಣ ಸಭಾಹಿತ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮರೀನಾ ಸರೋಜಾ ಶುಭಾಶಂಸನೆಗೈದರು.
ಸಭಾಭವನ ಕೊಡುಗೆ ನೀಡಿದ ನಾಡೋಜ ಡಾ| ಜಿ. ಶಂಕರ್, ಶಾಲಾ ಬಯಲುರಂಗ ಮಂದಿರದ ದಾನಿ ಸತೀಶ್ ಶೆಟ್ಟಿ ದಂಪತಿ ಮುಂಬಯಿ, ವಿಜ್ಞಾನ ಪ್ರಯೋಗಾಲಯದ ದಾನಿ ಹರಿಯಪ್ಪ ಕೋಟ್ಯಾನ್, ಶಾಲಾ ಮುಖ್ಯೋಪಾಧ್ಯಾಯಿನಿ ಮರೀನಾ ಸರೋಜ ಮತ್ತು ದಾನಿ ಭರತ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗುಂಡು ಬಿ. ಅಮೀನ್ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ನಿರೂಪಿಸಿದರು. ಶಾಲಾ ಸಂಚಾಲಕ ಪ್ರೊ| ರಾಧಾಕೃಷ್ಣ ಆಚಾರ್ಯ ವಂದಿಸಿದರು.