ರಾಯಚೂರು: ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡದಂತೆ ತಡೆಯಲು ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಉಚಿತ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಎಚ್‌ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಸುರೇಂದ್ರ ಬಾಬು ತಿಳಿಸಿದರು.
ನಗರದ ಜಹೀರಾಬಾದ್ ನಗರ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ತಾಯಿಯಿಂದ ಮಗುವಿಗೆ ಎಚ್ ಐವಿ ಸೋಂಕು ಹರಡುವಿಕೆ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರಿಗೆ ಆರೋಗ್ಯದ ಬಗ್ಗೆ ಶಿಕ್ಷಣ ನೀಡುವ ಅಗತ್ಯವಿದೆ. ರೋಗಗಳ ಬಗ್ಗೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿ ರೋಗಗಳು ಈಗ ವೈದ್ಯಲೋಕಕ್ಕೆ ಸವಾಲಾಗುತ್ತಿದೆ. ದೇಶದ ವೈದ್ಯರು ರೋಗಗಳ ನಿವಾರಣೆಗೆ ಎಲ್ಲ ತರಹದ ಚಿಕಿತ್ಸೆ ಹಾಗೂ ಔಷಧ ನೀಡುತ್ತಿದ್ದಾರೆ ಎಂದರು.
ಗರ್ಭಧಾರಣೆಗೆ ಮುಂಚೆ ಮಹಿಳೆಯರು ಒಮ್ಮೆ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ತಮ್ಮ ಗರ್ಭಾವಸ್ಥೆಯ 9 ತಿಂಗಳ ಸಮಗ್ರ ಚಿತ್ರಣ ಹೇಗಿರಲಿದೆ ಎಂಬ ಮಾಹಿತಿ ಪಡೆಯಬೇಕು. ಯಾವ ಬಗೆಯ ಆಹಾರಗಳನ್ನು ಸೇವಿಸಬೇಕು, ಯಾವ ಆಹಾರಗಳನ್ನು ತಿನ್ನಲೇಬಾರದು, ಬೆಳಗಿನಿಂದ ಸಂಜೆಯವರೆಗೂ ನಮ್ಮ ಜೀವನ ಶೈಲಿ ಯಾವ ರೀತಿ ಇರಬೇಕು, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ತಜ್ಞರೊಂದಿಗೆ ಚರ್ಚಿಸಬೇಕು ಎಂದು ತಿಳಿಸಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ| ಶಕೀರ ಮಾತನಾಡಿ, ಗರ್ಭಿಣಿಯರಲ್ಲಿ ಮತ್ತು ಗರ್ಭಿಣಿಯರಿಂದ ಮಕ್ಕಳಿಗೆ ಎಚ್‌ಐವಿ ಹರಡದಂತೆ ಆರೋಗ್ಯ ಇಲಾಖೆ ಸಾಕಷ್ಟು ಶ್ರಮಿಸುತಿದೆ. ಇದಕ್ಕೆ ಜನರ ಸಹಕಾರವೂ ಮುಖ್ಯ ಎಂದರು. ಇದೇ ವೇಳೆ ಸುಮಾರು 40ಕ್ಕೂ ಹೆಚ್ಚು ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಕೇಂದ್ರದ ಆರೋಗ್ಯಾ ಧಿಕಾರಿ ಡಾ| ಕಾವ್ಯಶ್ರೀ, ದಂತ ವೈದ್ಯಾಧಿಕಾರಿ ಶರಣಮ್ಮ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು.