Advertisement

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

05:11 PM Dec 28, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಕಾಂಗ್ರೆಸ್‌ ಸರ್ಕಾರ ಮತ್ತು ಪಕ್ಷಕ್ಕೆ ಈ ವರ್ಷದ ಕೊನೆ ಶುಭವಾಗಿ ಮುಗಿಯಲಿಲ್ಲ. ಎರಡು ಮಹತ್ವದ ಕ್ಷಣಗಳಿಗೆ ಶೋಕಾಚರಣೆ ಕಾಡಿತು. ಪರಿಣಾಮ ಸಂಭ್ರಮದ ಕ್ಷಣಗಳನ್ನು ಆನಂದಿಸುವ ಅವಕಾಶ ಪಕ್ಷದ ಕಾರ್ಯಕರ್ತರಿಗೆ ಸಿಗಲೇ ಇಲ್ಲ. ಕಾಂಗ್ರೆಸ್‌ ಸರ್ಕಾರದ ಎರಡು ಮಹತ್ವಪೂರ್ಣ ಅಧಿವೇಶನಗಳಿಗೆ ದೇಶದ ಇಬ್ಬರು ಮಹಾನ್‌ ನಾಯಕರ ಅಗಲಿಕೆ ನೋವು ತಂದಿಟ್ಟಿತು.

Advertisement

ಮೊದಲು ಚಳಿಗಾಲದ ಅಧಿವೇಶನಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲ ಎಸ್‌.ಎಂ.ಕೃಷ್ಣ ಅಗಲಿಕೆ ಅಡ್ಡಿಯಾದರೆ, ವರ್ಷದ ಕೊನೆಗೆ ನಡೆದ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ ಕಾಡಿತು. ಈ ಎರಡೂ ವಿಷಾದದ ಘಟನೆಗಳಿಗೆ ಸಾಕ್ಷಿಯಾಗಿದ್ದು ಗಡಿನಾಡು ಬೆಳಗಾವಿ ಎಂಬುದು ಸಹ ಅಷ್ಟೇ ನೋವಿನ ಸಂಗತಿ.

ಚಳಿಗಾಲದ ಅಧಿವೇಶನಕ್ಕೆ ಸಂಪೂರ್ಣ ಸಿದ್ಧವಾಗಿಯೇ ಬಂದಿದ್ದ ಕಾಂಗ್ರೆಸ್‌ ಸರ್ಕಾರ ಮತ್ತು ಪಕ್ಷದ ನಾಯಕರಿಗೆ ಅಧಿವೇಶನದ ಆರಂಭದಲ್ಲೇ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನಿಧನ ಆಘಾತ ಉಂಟುಮಾಡಿತು. ಹೀಗಾಗಿ ಅಧಿವೇಶನದ ಮೊದಲ ವಾರ ಒಂದು ರೀತಿ ಶೋಕದಲ್ಲೇ ಮುಗಿದು ಹೋಯಿತು. ಎರಡನೇ ವಾರದ ಅಧಿವೇಶನ ನಾಲ್ಕು ದಿನಗಳಿಗೆ ಸೀಮಿತವಾಗಿದ್ದರಿಂದ ಈ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರದಿಂದ ಮಹತ್ವದ ನಿರ್ಧಾರಗಳು ಹೊರಬರಲಿಲ್ಲ.

ಎಸ್‌.ಎಂ.ಕೃಷ್ಣ ನಿಧನದ ನೋವನ್ನು ಮರೆತು ಕಾಂಗ್ರೆಸ್‌ ಸರ್ಕಾರ ಮತ್ತು ಪಕ್ಷದ ನಾಯಕರು ಇದೇ ಬೆಳಗಾವಿಯಲ್ಲಿ ಇನ್ನೊಂದು ಮಹತ್ವದ ಕ್ಷಣಗಳಿಗೆ ಸಜ್ಜಾದರು. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಚಳಿಗಾಲದ ಅಧಿವೇಶನದ ಸಮಯದಲ್ಲೇ ಭರ್ಜರಿ ತಯಾರಿ ನಡೆದಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ ಬೀಡುಬಿಟ್ಟು ಶತಮಾನೋತ್ಸವ ಆಚರಣೆಯ ಉಸ್ತುವಾರಿ ನೋಡಿಕೊಂಡಿದ್ದರು.

ಚಳಿಗಾಲದ ಅಧಿವೇಶನ ಮುಗಿದ ಬೆನ್ನಲ್ಲೇ ಬೆಳಗಾವಿಯ ಚಿತ್ರಣವೇ ಬದಲಾಗಿತ್ತು. ನಗರದ ಬಹುತೇಕ ರಸ್ತೆಗಳು ಹೊಸ ರೂಪ
ಪಡೆದುಕೊಂಡಿದ್ದವು. ಎಲ್ಲ ಪ್ರಮುಖ ರಸ್ತೆಗಳು ಕಾಂಗ್ರೆಸ್‌ ಮಯವಾಗಿದ್ದವು. ಮೈಸೂರು ಮಾದರಿಯಲ್ಲಿ ಬೆಳಗಾವಿಯ ರಸ್ತೆಗಳು ಅತ್ಯಾಕರ್ಷಕ ದೀಪಾಲಂಕಾರಗಳಿಂದ ಝಗಮಗಿಸುತ್ತಿದ್ದವು.

Advertisement

ಬೆಳಗಾವಿಯ ಜನರು ಮೊದಲ ಬಾರಿಗೆ ಇಂತಹ ದೀಪಾಲಂಕಾರದ ವೈಭವ ಕಂಡಿದ್ದರು. ನಗರದ ಚಿತ್ರಣ ನೋಡಿದಾಗ ಮತ್ತೂಮ್ಮೆ ಮಹಾತ್ಮ ಗಾಂಧೀಜಿ ಅವರೇ ಅಧಿವೇಶನ ನಡೆಸಲು ಬರುತ್ತಿದ್ದಾರೆ ಎಂದೇ ಭಾಸವಾಗಿತ್ತು. ಡಿ.26ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ರಾಷ್ಟ್ರದ ಪ್ರಮುಖ ನಾಯಕರು ಬೆಳಗಾವಿಗೆ ಬಂದಿಳಿದಾಗ ಕಾಂಗ್ರೆಸ್‌ ಕಾರ್ಯಕರ್ತರು ಪುಳಕಿತಗೊಂಡಿದ್ದರು. ಸೋನಿಯಾ ಗಾಂಧಿ ಮತ್ತು ಪ್ರಿಯಂಕಾ ಗಾಂಧಿ ಬರಲಿಲ್ಲ ಎಂಬ ನಿರಾಸೆ ಇದ್ದರೂ ರಾಹುಲ್‌ ಉಪಸ್ಥಿತಿ ಇದೆಲ್ಲವನ್ನೂ ಮರೆಸಿತ್ತು.

ಮಧ್ಯಾಹ್ನ ಟಿಳಕವಾಡಿಯ ವೀರಸೌಧ ಆವರಣ 100 ವರ್ಷಗಳ ನಂತರ ಮತ್ತೂಂದು ಐತಿಹಾಸಿಕ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಯಿತು. 1924ರಲ್ಲಿ ಇದೇ ವೀರಸೌಧ ಆವರಣದಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. 100 ವರ್ಷಗಳ ನಂತರ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆ ಕರ್ನಾಟಕದವರಾದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದಿದ್ದು ಅವಿಸ್ಮರಣೀಯ ಮತ್ತು ವಿಶೇಷ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯ ನಂತರ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯೋಜಿಸಿದ್ದ ಔತಣ ಕೂಟದಲ್ಲಿ ಕಾಂಗ್ರೆಸ್‌ನ ಎಲ್ಲ ನಾಯಕರು ಪಾಲ್ಗೊಂಡಿದ್ದರು. ಅಧಿವೇಶನದ ಯಶಸ್ಸಿನ ಸಂಭ್ರಮದಲ್ಲಿದ್ದ ನಾಯಕರಿಗೆ ಆ ಕ್ಷಣದಲ್ಲಿ ಬಂದ ಮನಮೋಹನ್‌ ಸಿಂಗ್‌ ನಿಧನದ ಸುದ್ದಿ ಮುಂದೆ ಎಲ್ಲ ಚಿತ್ರವನ್ನೂ ಬದಲಾಯಿಸಿಬಿಟ್ಟಿತು. ಆಗ ಇದ್ದ ಸಂಭ್ರಮ ಶೋಕದಲ್ಲಿ ಪರಿವರ್ತನೆಯಾಯಿತು. ಮುಂದಿನ ಎಲ್ಲ ಕಾರ್ಯಕ್ರಮಗಳಿಗೂ ಇದರ ಪರಿಣಾಮ ಉಂಟಾಯಿತು.
ಡಿ.27ರಂದು ಬೆಳಗ್ಗೆಯಿಂದ ಎರಡು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸುವರ್ಣ ವಿಧಾನಸೌಧದ ಆವರಣದಲ್ಲಿ
ಬೃಹದಾಕಾರದ ಗಾಂಧೀಜಿ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾವರಣ ಮಾಡಬೇಕಿತ್ತು. ಇದಾದ ನಂತರ ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಕಾಂಗ್ರೆಸ್‌ ಪಕ್ಷದ ಬೃಹತ್‌ ಸಮಾವೇಶನಕ್ಕೆ ಸಿಪಿಎಡ್‌ ಮೈದಾನ ಸಂಪೂರ್ಣ ಸಜ್ಜಾಗಿ ನಿಂತಿತ್ತು. ಈ ಸಮಾವೇಶಕ್ಕೆ ವಿವಿಧ ಕಡೆಗಳಿಂದ ಲಕ್ಷಾಂತರ ಜನರ ನಿರೀಕ್ಷೆ ಮಾಡಲಾಗಿತ್ತು. ಆದರೆ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಆಭೂತಪೂರ್ವ ಸಂಭ್ರಮಾಚರಣೆ ನಡೆಯಬೇಕಿದ್ದ ಸ್ಥಳದಲ್ಲಿ ಶೋಕಾಚರಣೆ ಮಾಡಬೇಕಾದ ಪರಿಸ್ಥಿತಿ ಬಂದಿದ್ದು ವಿಪರ್ಯಾಸವೇ ಸರಿ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next