Advertisement

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

12:16 AM Dec 27, 2024 | Team Udayavani |

ಬಂಟ್ವಾಳ: ಬಿ.ಸಿ. ರೋಡಿನ ಕೈಕಂಬದ ಪರ್ಲಿಯಾ ಬಳಿ ಮನೆಗೆ ದಾಳಿ ಮಾಡಿ ಗರ್ಭಿಣಿ ಹಾಗೂ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲಿನ ಹಲ್ಲೆ ಪ್ರಕರಣವನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿ ಘಟನ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬುವ ಜತೆಗೆ ಪ್ರಕರಣದ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಿಷ್ಪಕ್ಷ ತನಿಖೆಗೆ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ವಿಮೆನ್‌ ಇಂಡಿಯಾ ಮೂವ್‌ಮೆಂಟ್‌ ಸಂಘಟನೆಯ ನಿಯೋಗವು ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ| ನಾಗಲಕ್ಷ್ಮೀ ಚೌಧರಿ ಅವರನ್ನು ಭೇಟಿ ಮಾಡಿ ಆಗ್ರಹಿಸಿದೆ.

Advertisement

ಪರ್ಲಿಯಾ ನಿವಾಸಿ ಶಾಹುಲ್‌ ಹಮೀದ್‌ ಅವರ ಮನೆಗೆ ಬಂಟ್ವಾಳದ ರೌಡಿಶೀಟರ್‌ ಹಸೈನಾರ್‌ ಹಾಗೂ 10ಕ್ಕೂ ಅಧಿಕ ಕಿಡಿಗೇಡಿಗಳು ನುಗ್ಗಿ ಗರ್ಭಿಣಿ ಹಾಗೂ ಬಾಲಕಿ ಒಳಗೊಂಡು ಮನೆ ಮಂದಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಪ್ರಕರಣದ ಆರೋಪಿಗಳ ಮೇಲೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ, ಕೊಲೆಯತ್ನ ಸೇರಿದಂತೆ ಗಂಭೀರ ಪ್ರಕರಣಗಳು ದಾಖಲಾದರೂ ಪೊಲೀಸರು ಸಂತ್ರಸ್ತ ದೂರುದಾರರ ಮೇಲೆ ಆರೋಪಿಗಳು ದಾಖಲಿಸಿದ ಸುಳ್ಳು ಪ್ರಕರಣದ ಮೇಲೆ ದೂರು ದಾರರನ್ನೇ ಬಂಧಿಸಿದ್ದಾರೆ. ಘಟನೆ ಯಿಂದ ಮೊದಲೇ ಆತಂಕದಲ್ಲಿರುವ ಸಂತ್ರಸ್ತ ಕುಟುಂಬ ಪ್ರಸ್ತುತ ಯಜಮಾನನ ಬಂಧನದಿಂದ ಇನ್ನಷ್ಟು ಕುಪಿತವಾಗಿದೆ.

ಆರೋಪಿಗಳ ಹಿನ್ನೆಲೆ ಮತ್ತು ಪ್ರಸ್ತುತ ಘಟನೆಯ ಮಾಹಿತಿಯನ್ನು ಕಲೆ ಹಾಕಿ ಎಲ್ಲ ಆರೋಪಿಗಳನ್ನು ಕಾನೂನಿನಡಿ ಬಂಧಿಸಬೇಕು. ಸಂತ್ರಸ್ತ ಕುಟುಂಬದ ಮೇಲೆ ದಾಖಲಾದ ಸುಳ್ಳು ದೂರಿನ ಕುರಿತು ತನಿಖೆಗೆ ಆಯೋಗವು ನಿರ್ದೇಶನ ನೀಡಬೇಕು. ಇಂತಹ ದಾಳಿಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಮಹಿಳಾ ಆಯೋಗವು ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಮನವಿಗೆ ಸ್ಪಂದಿಸಿದ ಆಯೋಗದ ಅಧ್ಯಕ್ಷರು ಈ ಘಟನೆಯ ಕುರಿತು ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಆಯಿಷಾ, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಸುಮಯ್ಯ ಮನವಿ ನೀಡುವ ವೇಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next