ಬೀದರ: ಬೀದರ ಉತ್ತರ ಕ್ಷೇತ್ರದಿಂದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಪ್ರಮುಖರು ಮತ್ತು ಅಭಿಮಾನಿಗಳು ಆಗ್ರಹಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮತ್ತು ಸಂಸದ ಭಗವಂತ ಖೂಬಾ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. 2016ರ ಉಪ ಚುನಾವಣೆಯಲ್ಲಿ ಬೀದರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖಂಡ್ರೆ ಕೇವಲ 10 ದಿನಗಳ ಪ್ರಚಾರ ನಡೆಸಿ ಸುಮಾರು 50,000 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು.
ಪ್ರಚಾರಕ್ಕೆ ಆಗಮಿಸಿದ ಪಕ್ಷದ ವರಿಷ್ಠರು ಮುಂದಿನ ಚುನಾವಣೆಯಲ್ಲೂ ಖಂಡ್ರೆಯವರೇ ಸ್ಪರ್ಧಿಸುವರು ಎಂದು ಘೋಷಣೆ ಮಾಡಿದ್ದರು. ಅದರಂತೆ ಅವರಿಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಉಪ ಚುನಾವಣೆ ನಂತರ ಬೀದರ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ತಮ್ಮ ತನು, ಮನ, ಧನದಿಂದ ದುಡಿದಿದ್ದು, ಚುನಾವಣೆಯಲ್ಲಿ ಪರಾಭವದ ಬಳಿಕವೂ ಬೀದರನಲ್ಲಿ ಟ್ಯಾಂಕರ್ ಮೂಲಕ ಉಚಿತ ನೀರು ಸರಬರಾಜು ಮಾಡಿ ನೀರಿನ ಬವಣೆ ನೀಗಿಸಿದ್ದಾರೆ. ಜಿಪಂ, ತಾಪಂನಲ್ಲಿ ತಲಾ 1, ಎಪಿಎಂಸಿಯಲ್ಲಿ 3 ಸ್ಥಾನಗಳ ಗೆಲುವಿನ ಶ್ರೇಯ ಪ್ರಕಾಶ ಅವರಿಗೆ ಸಲ್ಲುತ್ತದೆ. ಈ
ಬಾರಿ ಟಿಕೆಟ್ ನೀಡಿದರೆ ಅವರ ಜಯ ಖಚಿತ ಎಂದು ತಿಳಿಸಲಾಗಿದೆ.
ಜಿಪಂ ಸದಸ್ಯೆ ತಾರಾಬಾಯಿ ರಾಠೊಡ, ತಾಪಂ ಸದಸ್ಯ ಸವಿತಾ ಧರ್ಮೇಂದರ, ಎಪಿಎಂಸಿ ಉಪಾಧ್ಯಕ್ಷ ಮಾರುತಿ ಚಾಂಚೋಳ, ಸದಸ್ಯರಾದ ಸುನಿತಾ ಜಗನ್ನಾಥ, ಬಸವರಾಜ ಶರ್ಮಾ, ಯುವ ಮೊರ್ಚಾ ಕಾರ್ಯದರ್ಶಿ ಬಸವರಾಜ ಭತಮುರ್ಗೆ, ರೈತ ಮೊರ್ಚಾ ಅಧ್ಯಕ್ಷ ಬಸವರಾಜ ಪನಸಾಲೆ ಪ್ರಮುಖರಾದ ನವೀನ್ ಚಿಟ್ಟಾ, ದೀಪಕ ಚಿದ್ರಿ, ನೋಹನ್ ರಾಜ ಮತ್ತಿತರರು ಇದ್ದರು.