Advertisement

ಬಕ್ರೀದ್ ಸಂದರ್ಭದ ರಾಜ್ಯಾದ್ಯಂತ 707 ಜಾನುವಾರುಗಳ ರಕ್ಷಣೆ, 67 ಜನರ ಬಂಧನ : ಪ್ರಭು ಚವ್ಹಾಣ್

05:13 PM Jul 12, 2022 | Team Udayavani |

ಬೆಂಗಳೂರು : ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯಾದ್ಯಂತ 707 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದ್ದು, 60 ಎಫ್.ಐ.ಆರ್ ಪ್ರಕರಣಗಳನ್ನು ದಾಖಲಿಸಿ 67 ಜನರನ್ನು ಬಂಧಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.

Advertisement

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 551 ಗೋವುಗಳು, ,144 ಎಮ್ಮೆ-ಕೋಣ, 12 ಒಂಟೆಗಳನ್ನು ರಕ್ಷಣೆ ಮಾಡಿ ಸ್ಥಳೀಯ ಗೋಶಾಲೆಗಳಿಗೆ ಕಳುಹಿಸಿಕೊಡಲಾಗಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ 193 ಗೋವು, 4 ಎಮ್ಮೆ, ಬೀದರ್ ಜಿಲ್ಲೆಯಲ್ಲಿ 92 ಗೋವು ಮತ್ತು ‌35 ಎಮ್ಮೆ, ತುಮಕೂರು ಜಿಲ್ಲೆಯಲ್ಲಿ 90 ಗೋವು ಮತ್ತು 20 ಎಮ್ಮೆ, ಬೆಂಗಳೂರು ನಗರದಲ್ಲಿ 66 ಗೊವು ಮತ್ತು 11 ಎಮ್ಮೆ, ಮೈಸೂರು ಜಿಲ್ಲೆಯಲ್ಲಿ 33 ಗೋವು, 15 ಎಮ್ಮೆ, ಹಾವೇರಿ ಜಿಲ್ಲೆಯಲ್ಲಿ 23 ಎಮ್ಮೆ, 2 ಗೋವು, ಕೋಲಾರದಲ್ಲಿ 21 ಗೋವು, ರಾಯಚೂರಿನಲ್ಲಿ 26 ಎಮ್ಮೆ, ಹಾಸನ 19, ಚಿಕ್ಕಬಳ್ಳಾಪುರದಲ್ಲಿ 10 ಎಮ್ಮೆ, ಚಿತ್ರದುರ್ಗ 7, ಉಡುಪಿ 6, ಶಿವಮೊಗ್ಗ 2, ಬೆಂಗಳೂರು ಗ್ರಾಮಾಂತರ ‌6, ದಕ್ಷಿಣ ಕನ್ನಡ 21 ಗೋವುಗಳನ್ನು ಹಾಗೂ ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 6 ಒಟ್ಟು 12 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರಭು ಚವ್ಹಾಣ್ ಅವರು ವಿವರಿಸಿದರು.

ಕಲಬುರಗಿ ಜಿಲ್ಲೆಯಲ್ಲಿ 16 ಪ್ರಕರಣ ದಾಖಲಿಸಿ, 18 ಜನರನ್ನು ಬಂಧಿಸಿದ್ದರೆ, ಬೀದರ್ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಿಸಿ 6 ಜನರನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 5 ಪ್ರಕರಣ ದಾಖಲಿಸಿ 6 ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ ವಶಪಡಿಸಿಕೊಂಡ ಜಾನುವಾರುಗಳನ್ನು ಸ್ಥಳೀಯ ಗೋಶಾಲೆಗಳಲ್ಲಿ ರಕ್ಷಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ : ಸಿದ್ದರಾಮೋತ್ಸವ ಆಚರಣೆ ಕುರಿತು ಸಿದ್ದರಾಮಯ್ಯ ಅವರು ಹೇಳಿದ್ದೇನು?

Advertisement

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಬಲಿಕೊಡುವ ಸಂಪ್ರದಾಯವಿದ್ದು, ಇದಕ್ಕಾಗಿ ಜಾನುವಾರುಗಳಾದ ಗೋವು, ಎತ್ತು, ಹೋರಿ, ಕರು, ಒಂಟೆ, 13 ವರ್ಷದೊಳಗಿನ ಎಮ್ಮೆ-ಕೋಣಗಳನ್ನು ಬಲಿ ಕೊಡುವುದನ್ನು ತಡೆಗಟ್ಟಲು ರಾಜ್ಯದ ಎಲ್ಲಾ ಗಡಿ ಭಾಗಗಳ ಚೆಕ್ ಪೋಸ್ಟುಗಳಲ್ಲಿ ಜಾನುವಾರುಗಳ ಅಕ್ರಮ ಸಾಗಾಣಿಕೆ ತಡೆಗಟ್ಟಲು ವಾಹನ ತಪಾಸಣೆ ಮಾಡುವಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಗೃಹ ಸಚಿವರು ಮತ್ತು ಗೃಹ ಇಲಾಖೆ ಅಪರ ಕಾರ್ಯದರ್ಶಿ ಅವರಿಗೆ ಕೋರಿದ್ದರಿಂದ ಪೊಲೀಸ್ ಇಲಾಖೆಯ ಸಹಕಾರದಿಂದಾಗಿ ಇಂದು ಈ ಮಟ್ಟದಲ್ಲಿ ಜಾನುವಾರುಗಳ ರಕ್ಷಣೆ ಮಾಡಲು ಸಾಧ್ಯವಾಗಿದೆ ಎಂದು ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡರು.

ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಸೀದಿಗಳ ಮೌಲ್ವಿಗಳೊಂದಿಗೆ ಶಾಂತಿ ಸಭೆಗಳನ್ನು ನಡೆಸಿ, ನಗರ ವ್ಯಾಪ್ತಿಗಳಲ್ಲಿ ಆಟೋಗಳಲ್ಲಿ ಮೈಕ್ ಅಳವಡಿಸಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಕಳೆದ ವರ್ಷಕ್ಕಿಂತ ‌ಈ ವರ್ಷ ಜಾನುವಾರುಗಳ ವಧೆಯಲ್ಲಿ ಇಳಿಕೆಯಾಗಿದೆ. ಹಗಲು-ಇರುಳು ಎನ್ನದೇ ಜಾನುವಾರುಗಳ ರಕ್ಷಣೆಯಲ್ಲಿ ಮುಂದಾದ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪಶುಸಂಗೋಪನೆ ಇಲಾಖೆ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದರು. ಅವರ ಸೇವೆ ಜಾನುವಾರುಗಳ ರಕ್ಷಣೆ ಅಮೂಲ್ಯವಾದ್ದದ್ದು ಎಂದು ಸಚಿವ ಪ್ರಭು ಚವ್ಹಾಣ್ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.

ಈ ವರ್ಷ ಗೋವುಗಳ ಅಕ್ರಮ ವಧೆಯನ್ನು ತಡೆಗಟ್ಚುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ತಂದದ್ದು ಅನುಕೂಲವಾಯಿತು ಎಂದು ಸಾರ್ವಜನಿಕರು ಪೋನ್ ಕರೆಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ಪ್ರಭು ಚವ್ಹಾಣ್ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next