ಬೆಂಗಳೂರು: ಸ್ನೇಹಿತರ ಜತೆ ಪಾರ್ಟಿ ಮುಗಿಸಿಕೊಂಡು ಬರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿರುವ ಘಟನೆ ಮಹದೇವಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿನ್ನಯ್ಯನಪಾಳ್ಯ ನಿವಾಸಿ ಶ್ರೀಕಾಂತ್(28) ಮೃತ ಸವಾರ. ಸೋಮವಾರ ಮುಂಜಾನೆ ಸುಮಾರು 2 ಗಂಟೆ ಸುಮಾರಿಗೆ ಹೂಡಿ ಮೆಟ್ರೋ ನಿಲ್ದಾಣದ ಬಳಿ ದುರ್ಘಟನೆ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಕಚೇರಿ ಸಹಾಯ ಕನಾಗಿದ್ದ ಶ್ರೀಕಾಂತ್ ಭಾನುವಾರ ರಾತ್ರಿ ಕುಟುಂಬದ ಜತೆ ಮನೆಯಲ್ಲೇ ತಮ್ಮ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಬಳಿಕ ಸ್ನೇಹಿತರ ಜತೆಗೆ ಪಾರ್ಟಿ ಮಾಡಲು ಹೂಡಿ ಸಮೀಪದ ಹೋಗಿದ್ದು, ಪಾರ್ಟಿ ಮುಗಿಸಿ ಕೊಂಡು ಮುಂಜಾನೆ ದ್ವಿಚಕ್ರ ವಾಹನದಲ್ಲಿ ಬರುವಾಗ ಹೂಡಿ ಮೆಟ್ರೋ ನಿಲ್ದಾಣದ ಬಳಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದ ಶ್ರೀಕಾಂತ್, ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಶ್ರೀಕಾಂತ್ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.