Advertisement

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

10:45 PM Dec 21, 2024 | Team Udayavani |

ಬೆಂಗಳೂರು: ಮೇಲ್ಮನೆ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಕರಣದಲ್ಲಿ ಸರಿಯಾಗಿ ನಡೆದುಕೊಂಡಿದ್ದೇವೆ ಎಂಬ ವಾದ ಪೊಲೀಸರ ಕಡೆಯಿಂದ ಇದ್ದೇ ಇರುತ್ತದೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸಿ.ಟಿ.ರವಿ ಅವರು ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಅವಾಚ್ಯವಾಗಿ ನಿಂದಿಸಿ ಬಂಧನಕ್ಕೊಳಗಾಗಿರುವ ಪ್ರಕರಣ ನ್ಯಾಯಾಲಯದಲ್ಲಿದೆ. ಕೋರ್ಟ್‌ನಲ್ಲಿರುವ ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡುವುದು ಸರಿಯಲ್ಲ. ಹೀಗಾಗಿ ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ. ಸಿ.ಟಿ.ರವಿ ಹಲ್ಲೆಗೆ ಯತ್ನಿಸಲು ಮುಂದಾಗಿದ್ದ 24 ಜನರ ತತ್‌ಕ್ಷಣ ಬಂಧಿಸದಿದ್ದರೆ ಇನ್ನೂ ಹೆಚ್ಚಿನ ಘಟನೆಗಳು ನಡೆಯುತ್ತಿತ್ತು. ಸದ್ಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಕೆಲವರು ಸದನ ಮುಗಿದ ಬಳಿಕ ಘಟನೆ ನಡೆಯಿತು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಸದನ ನಡೆಯುತ್ತಿತ್ತು ಎಂದು ವಿಶ್ಲೇಷಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಖಲೆಗಳಿಲ್ಲ ಎಂದು ಸಭಾಪತಿಗಳು ಹೇಳಿರುವುದೂ ನನಗೆ ಗೊತ್ತಿಲ್ಲ ಎಂದರು. ಸದನ ನಡೆಯದೇ ಇದ್ದಾಗ ಘಟನೆ ನಡೆದಿರುವುದರಿಂದ ಸಭಾಪತಿಗಳು ಏನೂ ಹೇಳಲಾಗುತ್ತಿಲ್ಲ ಎಂದೂ ಮತ್ತೆ ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಗೃಹ ಇಲಾಖೆ ಓವರ್‌ಟೇಕ್‌ ಆಗಿದೆ ಅನಿಸುತ್ತಿಲ್ಲ:
ನನಗೆ ಇಲಾಖೆಯಲ್ಲಿ ಸಾಕಷ್ಟು ಸ್ವಾತಂತ್ರ್ಯವಿದೆ. ಗೃಹ ಇಲಾಖೆಯನ್ನು ಓವರ್‌ ಟೇಕ್‌ ಮಾಡಿ ಈ ಬೆಳವಣಿಗೆ ಆಗಿದೆ ಎಂದು ನನಗೇನೂ ಅನ್ನಿಸುತ್ತಿಲ್ಲ. ನನ್ನ ಮೇಲೆ ಮುಖ್ಯಮಂತ್ರಿಗಳು ಬಿಟ್ಟರೆ ಬೇರೆ ಯಾರೂ ಇಲ್ಲ. ಇನ್ನು ಸಿ.ಟಿ.ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಲು ಮುಂದಾಗಿದ್ದ 24 ಜನರನ್ನು ಆ ಕ್ಷಣವೇ ಪೊಲೀಸರು ಬಂಧಿಸಿದ್ದಾರೆ. ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ಬಂಧನ ಮಾಡದೇ ಹೋಗಿದ್ದರೆ ಇನ್ನೂ ಹೆಚ್ಚು ಘಟನೆಗಳು ಆಗುತ್ತಿತ್ತು. ಕೋರ್ಟ್‌ ನೀಡಿರುವ ತಡೆಯಾಜ್ಞೆ ಆದೇಶವನ್ನು ತೆರವುಗೊಳಿಸಲು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next