Advertisement

ಪಿಪಿಟಿ ಪ್ರವೀಣರು 

12:30 AM Jan 11, 2019 | |

ಪಿ. ಜಿ. ಕೋರ್ಸ್‌ ಮಾಡುತ್ತಾರೆ ಎಂದರೆ ಅಲ್ಲಿ ಪರ್ವ ಪಾಯಿಂಟ್‌ ಪ್ರಸೆಂಟೇಶನ್‌ (ppt) ಇದ್ದೇ ಇರುತ್ತದೆ. ಪದವಿ ದಿನಗಳಲ್ಲಿ ಲೋಕಾಭಿರಾಮವಾಗಿ ಕಳೆದವರಿಗೆ ಇದು ಇರಿಸುಮುರಿಸು ಉಂಟುಮಾಡುತ್ತದೆ ಅಂದರೆ ತಪ್ಪಿಲ್ಲ. ಆರು ವಿಷಯಗಳಿಗೆ ಆರು ತರಹೇವಾರಿ ಗಣಕೀಕೃತ ವಿಚಾರಗಳ ಮಂಡನೆ ಮಣಭಾರವೇ ಸರಿ!

Advertisement

ಶುರು ಮಾಡೋದು ಹೇಗೆ?
ಪಿ.ಜಿ. ಕೋರ್ಸ್‌ ಮಾಡುವಾಗ ಅಷ್ಟರವರೆಗೆ ಸಭಾಸದರೆದುರು ಮಾತನಾಡದವರಿಗೆ ಪ್ರಸಂಟೇಶನ್‌ ಮಾಡೋದು ಅಂದರೆ, ಇದೊಂದು ತ್ರಾಸದಾಯಕ ಅನುಭವ. ಒಂದು, ಆಂಗ್ಲ ಭಾಷೆಯ ನಿರರ್ಗಳತೆಯ ಸಮಸ್ಯೆಯಾದರೆ, “ನಾನು ಜನರೆದುರು ಹಾಡು-ನಾಟಕ ಎಲ್ಲ ಮಾಡಿದ್ದೇನೆ. ಆದರೆ, ಈ ಥರ ಸೆಮಿನಾರ್‌ ಮಾಡೋದು ಮೊದ್ಲು’ ಅನ್ನೋರು ಮತ್ತೂಂದೆಡೆ.

ವಿಷಯ-ವಿಚಾರ-ವಿನಿಮಯ
ಪಿ.ಜಿ. ಕೋರ್ಸ್‌ ಮಾಡುವವರಿಗೆ ಆಂತರಿಕ ಅಂಕದಲ್ಲಿ ಐದು ಮಾರ್ಕು ಇದಕ್ಕೆ ಸೀಮಿತವಾಗಿರುತ್ತದೆ. ಆ ಐದು ಮಾರ್ಕ್‌ ಗಳಿಸಬೇಕೆಂದರೆ ವಿದ್ಯಾರ್ಥಿಗಳು ಮುತುವರ್ಜಿಯಿಂದ ಕೆಲಸ ಮಾಡಲೇಬೇಕಾಗಿರುತ್ತದೆ. ಪಿಪಿಟಿಗೆ ಒಬ್ಬೊಬ್ಬರಿಗೆ ಒಂದೊಂದು ಟಾಪಿಕ್‌ ಅಂತ ಬಂದಾಗ ಪ್ರತಿಯೊಬ್ಬರೂ ಅದಕ್ಕೆ ಸಂಬಂಧಪಟ್ಟ ಮಾಹಿತಿ ಸಂಗ್ರಹಣೆ ಮಾಡಬೇಕಾಗುತ್ತದೆ. ಗ್ರಂಥಾಲಯದ ಕಡೆ ಗೋಣು ಹಾಕದ ವಿದ್ಯಾರ್ಥಿಗಳೂ ಈ ನೆಪದಲ್ಲಾದರೂ ಸಂದರ್ಶಿಸುವ ಪ್ರಯತ್ನ ಮಾಡುತ್ತಾರೆ. ತನ್ನ ವಿಷಯ ಕುರಿತಾದ ಪುಸ್ತಕಗಳನ್ನ ಹುಡುಕಿ, ಬಿಡಿಸಿ ಓದಿ ಬರೆದು ಮಹಾತ್ಮರೆನಿಸಿದರೆ, ಇನ್ನು ಬಹುತೇಕ ವಿದ್ಯಾರ್ಥಿಗಳು google ಎಂಬ  ಮಾಯಾಜಾಲದ ಮೊರೆ ಹೋಗುತ್ತಾರೆ. ಅಲ್ಲೇ ದೊರಕುವ ಮಾಹಿತಿಗಳನ್ನು ಅಲ್ಲಿಂದ ಕತ್ತರಿಸಿ ಅಂಟಿಸುವ ಜಾಣ ವಿದ್ಯಾರ್ಥಿಗಳಿಗೂ ಕಮ್ಮಿ ಇಲ್ಲ. ಇನ್ನು ಕೆಲವು ಮಂದಿ ವಿನೂತನ ತಂತ್ರ ಬಳಸಿ ನಗುವಿನಿಂದ ಪಿಪಿಟಿ ಮುಗಿಸುತ್ತಾರೆ.

ತಯಾರಿ ಕಿರಿಕಿರಿ! 
ಪಿಪಿಟಿ ತಯಾರಿಗೆ ಮೊಬೈಲ್‌ ಇಲ್ಲವೇ ಲ್ಯಾಪ್‌ಟಾಪ್‌ ಮುಖ್ಯವಾಗಿ ಬೇಕಾಗುತ್ತದೆ. ಇದರಲ್ಲಿ ಯಾವುದಾದರೂ ಒಂದನ್ನು ಹೊಂದಿರುವವರಿಗೆ ತಯಾರಿಯ ಸಮಸ್ಯೆ ಎದುರಾಗದು. ಲ್ಯಾಟ್‌ಟಾಪ್‌ ಹೊಂದಿರುವವರ ಸಂಖ್ಯೆ ಕಡಿಮೆ ಇರಬಹುದು. ಆದರೆ ಇಂದಿನ ದಿನಗಳಲ್ಲಿ ಮೊಬೈಲ್‌ ಅಂತೂ ಎಲ್ಲರ ಬಳಿ ಇರುತ್ತದೆ. ಮೊಬೈಲ್‌ನಲ್ಲೂ ತಯಾರಿ ಮಾಡಿಕೊಳ್ಳಬಹುದು. ಹೆಚ್ಚಿನ ವಿದ್ಯಾರ್ಥಿಗಳು ಇದನ್ನೇ ಬಳಸಿಕೊಳ್ಳುವವರು !

ಮಂಡನೆ ದಿನ
ಪಿಪಿಟಿಯನ್ನು ಮೊದಲ ಸಲ ಮಂಡನೆ ಮಾಡುವ ವಿದ್ಯಾರ್ಥಿಗಳಲ್ಲಿ ಏನೋ ಭಯ ಕಾಣಿಸುತ್ತದೆ. ಯಾಕೆಂದರೆ, ಕೆಲವೊಮ್ಮೆ ಕನೆಕ್ಟಿಂಗ್‌ ಕೇಬಲ್‌ನ ಕಣ್ಣಾಮುಚ್ಚಾಲೆ ಆಟದಿಂದ ಹೊತ್ತು ಮೀರಿ ಸಮಸ್ಯೆಯಾಗಬಹುದು, ಇನ್ನು ಕೆಲವೊಮ್ಮೆ ಕಣ್ತಪ್ಪಿನಿಂದ, ಬಣ್ಣ ವ್ಯತ್ಯಾಸದಿಂದ ಬೇಸ್ತು ಬೀಳುವಂತಾಗಬಹುದು. ಮತ್ತೂ ಕೆಲವೊಮ್ಮೆ ಏನೋ ಬರೆದು, ಏನೋ ಓದಿ, ಏನೋ ಗ್ರಹಿಸಿ ಪೇಚಿಗೆ ಸಿಲುಕುವ ಪ್ರಮೇಯವೂ ತಪ್ಪಿದ್ದಲ್ಲ ! ಒಳ್ಳೆಯ ಪ್ರಯತ್ನ ನಡೆಸಿದರೂ ಸಭಾಸದರ ನಡುವೆ ತೊದಲುವ ವಿದ್ಯಾರ್ಥಿಗಳ ಜತೆ ತಮ್ಮದೇ ಧಾಟಿಯಲ್ಲಿ ಯಾವುದೇ ಹೆದರಿಕೆಯಿಲ್ಲದೆ ಪ್ರಸ್ತುತಪಡಿಸುವ ಪರಿಣಿತರಂತೂ ಜಾಣರೇ ಸರಿ.

Advertisement

ಬಾಹ್ಯ ಅವಕಾಶಗಳು
ಪಿಜಿ ಕೋರ್ಸ್‌ ಅವಧಿಯಲ್ಲಿ ಹೊರಗಿನ ಕಾಲೇಜ್‌ಗಳು, ಶೈಕ್ಷಣಿಕ ಸಂಸ್ಥೆಗಳು ರಿಸರ್ಚ್‌ ಪೇಪರ್‌ ಅನ್ನುವ ಪ್ರಾವಧಾನದ ಅಡಿಯಲ್ಲಿ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆಯ ಅವಕಾಶ ನೀಡುತ್ತದೆ. ಇಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಅಥವಾ ಮಾಧ್ಯಮಿಕ ದತ್ತಾಂಶ ಬಳಸಿಕೊಂಡು ತಯಾರಿ ಮಾಡಬೇಕಾಗುತ್ತದೆ. ಹಾಗಾಗಿ, ಇದೊಂದು ಶೈಕ್ಷಣಿಕ ಗುಣಮಟ್ಟವನ್ನು ಕೊಡುವ ವೇದಿಕೆಯ ಜತೆಗೆ ನಮ್ಮಂಥವರಿಗೆ ಅನುಭವ ಕೊಡುವ ಪಾಠಶಾಲೆಯೂ ಹೌದು.

ಪಿ. ಜಿ. ಹಂತ ಮುಗಿದರೆ ಮತ್ತೆ ಇಂತಹ ತರಗತಿ ಕೋಣೆಯ ಕಲ್ಪನೆ ದೂರದ ಮಾತು. ಪದವಿಯ ನಂತರ ಕೆಲಸ, ಹುಡುಕಾಟ, ವ್ಯವಹಾರದ ದಾರಿ ಹಿಡಿಯಬೇಕಾದಾಗ ಧೈರ್ಯ ಅನ್ನುವುದು ಮುಖ್ಯ. ಇದು ರೂಢಿಯಿಂದ ಬಾರದಿದ್ದರೂ ಇಂತಹ ಚಟುವಟಿಕೆಗಳು ಮನೋಧಾಡ್ಯìಕ್ಕೆ ಸಹಾಯಕ ಅನ್ನುವುದರಲ್ಲಿ ಎರಡು ಮಾತಿಲ್ಲ. 

ಸುಭಾಸ್‌ ಮಂಚಿ 
ಎಂಬಿಎ-ಪ್ರವಾಸೋದ್ಯಮ, 
ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next