Advertisement

ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ

04:53 PM Oct 30, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಮಣ್ಣಿನ ಹಣತೆಗಳಿಗೆ ಪರ್ಯಾಯವಾಗಿ ಚೀನಿ ಹಣತೆ ಮಾರುಕಟ್ಟೆಗೆ ಬಂದು ಕುಂಬಾರರ ಬದುಕಿನಲ್ಲಿ ಬಿರುಗಾಳಿ ಬೀಸುತ್ತಿದೆ. ಕುರಹಟ್ಟಿ ಪೇಟೆ, ಗಂಗಾಪೂರ ಪೇಟೆ, ಕುಂಬಾರ ಓಣಿಗಳಲ್ಲಿರುವ ಕುಂಬಾರ ಕುಟುಂಬಗಳು ತಲೆತಲಾಂತರದಿಂದ ಸಾಂಪ್ರದಾಯಿಕವಾಗಿ ಮಣ್ಣಿನ ಹಣತೆ ತಯಾರಿಸುತ್ತ ಬಂದಿದ್ದು, ಕುಂಬಾರರು ಮಾಡಿದ ಹಣತೆ ಕೇಳುವವರಿಲ್ಲದೇ ಅವರ ಬಾಳಲ್ಲಿ ಕತ್ತಲೆಯ ಕಾರ್ಮೋಡ ಕವಿಯುವಂತಾಗಿದೆ.

Advertisement

ದೀಪಾವಳಿಗೂ ಮುನ್ನ ಪಿಂಗಾಣಿಯ ಬಣ್ಣ ಬಣ್ಣದ ವಿವಿಧ ನಮೂನೆಯ ಚಿತ್ತಾಕರ್ಷಕ ಹಣತೆ ಹಾಗೂ ಚೀನಿ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ದೀಪದ ಬುಡದಲ್ಲಿ ಕತ್ತಲು ಎಂಬಂತೆ ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಬದುಕಿನಲ್ಲೂ ಕತ್ತಲು ಆವರಿಸಿದೆ.

ದಶಕದ ಹಿಂದೆ ದೀಪಾವಳಿ ಹಬ್ಬ ಬಂತೆಂದರೆ ಸಾಕು ಕುಂಬಾರರಿಗೆ ಕೈ ತುಂಬಾ ಕೆಲಸವಿರುತ್ತಿತ್ತು. ಆಗ ಅಕ್ಷರಶಃ ಅವರ ಬದುಕಿನಲ್ಲಿ ಬೆಳಕಿನ ಹಬ್ಬ ಅದಾಗಿತ್ತು. ದೀಪಾವಳಿಯ ಎರಡು ತಿಂಗಳ ಮುಂಚೆಯೇ ಲಾರಿಗಟ್ಟಲೇ ಜೇಡಿ ಮಣ್ಣು ತಂದು ಅದನ್ನು ಹದ ಮಾಡಿ ಮನೆಯ ಎಲ್ಲ ಸದಸ್ಯರು ಸೇರಿ ಸಾವಿರ ಸಾವಿರ ಹಣತೆ ತಯಾರಿಸಿ ಮನೆಯೊಳಗೆ, ಅಂಗಳ, ಖಾಲಿ ಜಾಗದಲ್ಲಿ ಆರಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು.

ಗ್ರಾಹಕರು ಮುಗಿಬಿದ್ದು ಮಣ್ಣಿನ ಹಣತೆಗಳನ್ನು 2ರಿಂದ 5 ಡಜನ್‌ ವರೆಗೆ ಒಯ್ಯುತ್ತಿದ್ದರು. ಆದರೀಗ ಅದೆಲ್ಲವೂ ಮಾಯವಾಗಿದೆ. ಆದರೆ ಇಂದು ಕುಂಬಾರ ಕುಂಟುಂಬಗಳು ಎರಡು ಸಾವಿರ ರೂ. ಕೊಟ್ಟು ಒಂದು ಟ್ರಾಕ್ಟರ್‌ ಮಣ್ಣು ತಂದು ಕೇವಲ ಸಾವಿರ ಹಣತೆ ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

ಬೆಲೆ ಕಡಿಮೆ ಇದ್ರೂ ಕೇಳ್ಳೋರಿಲ್ಲ: ದೀರ್ಘ‌ ಕಾಲ ಬಾಳಿಕೆ ಬರುವ ದೀಪ ಹಚ್ಚಲು ಮಣ್ಣಿನ ಹಣತೆಗಳೇ ಶ್ರೇಷ್ಠ. ಇವು ಎಷ್ಟೊತ್ತು ದೀಪ ಹಚ್ಚಿದರೂ ಏನೂ ಆಗಲ್ಲ. ಕುಂಬಾರರು ಜೇಡಿ ಮಣ್ಣು ಹದ ಮಾಡಿ ಕೈಚಳಕದಿಂದ ವಿವಿಧ ವಿನ್ಯಾಸದ ಹಣತೆ ತಯಾರಿಸಿ ಮಾರುಕಟ್ಟೆಯಲ್ಲಿ 5 ರೂ.ಗೆ ಒಂದು ಹಣತೆ, ಡಜನ್‌ ಮಣ್ಣಿನ ಹಣತೆಗೆ 45ರಿಂದ 50 ರೂ. ಕಡಿಮೆ ದರ
ಇದ್ದರೂ ಜನರು ಕೊಳ್ಳುತ್ತಿಲ್ಲ.

Advertisement

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಗ್ರಾಹಕರು ಮೊರೆ ಹೋಗಿರುವ ಚೀನಿ ಹಣತೆಗಳು, ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆಗಳು ನೋಡಲು ಸುಂದರವಾಗಿದ್ದರೂ ಅವು ಮಣ್ಣಿನ ಹಣತೆಯಷ್ಟು ಬಾಳಿಕೆ ಬರಲ್ಲ. ಜನರು ದೀರ್ಘ‌ ಬಾಳಿಕೆ ಬರುವ ಮಣ್ಣಿನ ಹಣತೆಗಳಿಗಿಂತ ನೋಡಲು ಆಕರ್ಷಕವಾಗಿರುವ ಯಂತ್ರದ ಮೂಲಕ ವಿವಿಧ ಆಕಾರಗಳಲ್ಲಿ ತಯಾರಿಸಿದ ಚೀನಿ ಹಣತೆಗಳಿಗೆ ಮಾರು ಹೋಗುತ್ತಿದ್ದು, ಕುಂಬಾರರು ಸಂಕಷ್ಟ ಎದುರಿಸುವಂತಾಗಿದೆ.

ದೀಪಾವಳಿಯಲ್ಲಿ ಕುಂಬಾರರ ಮಣ್ಣಿನ ಹಣತೆಗಳಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಮಾರಾಟದಿಂದ ಸಾಕಷ್ಟು ಹಣವೂ ಸಿಕ್ಕು ಅವರ ಬದುಕಿಗೆ ಆಸರೆಯಾಗುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಮಣ್ಣಿನ ಹಣತೆ ಮಾರಾಟವಾಗುತ್ತಿಲ್ಲ. ಇದನ್ನೇ ನಂಬಿದ
ಕುಂಬಾರರಿಗೆ ತೀವ್ರ ನಿರಾಸೆಯಾಗಿದೆ. ಕೆಲವರು ಮಣ್ಣಿನ ಹಣತೆಗಳನ್ನು ತಯಾರಿಸುವುದನ್ನು ನಿಲ್ಲಿಸುತ್ತಿದ್ದರೆ. ಸರಕಾರ ಕುಂಬಾರರ ಮೂಲ ಉದ್ಯೋಗ ಮುಂದುವರಿಸುವಲ್ಲಿ ವಿಶೇಷ ಯೋಜನೆ ರೂಪಿಸಬೇಕು.
*ಮುತ್ತಣ್ಣ ಭರಡಿ, ಪ್ರಧಾನ ಕಾರ್ಯದರ್ಶಿ, ಮಣ್ಣಿನ ಮೂರ್ತಿ ತಯಾರಕರ ಸಂಘ

ದೀಪದ ಬುಡಕ್ಕೆ ಕತ್ತಲೆ ಎಂಬಂತೆ ಹಣತೆ ಮಾರುವವರ ಬದುಕು ಕೂಡಾ ಈಗ ಕತ್ತಲೆಯಾಗಿದೆ. ಸರಕಾರ ಕುಂಬಾರರ ಬದುಕಿಗೆ
ಆಸರೆ ಕಲ್ಪಿಸಬೇಕಿದೆ.
*ರಾಜು ಬಸಪ್ಪ ಕುಂಬಾರ, ಪಣತಿ ತಯಾರಕರು.
ಕುರಹಟ್ಟಿ ಪೇಟೆ ಬೆಟಗೇರಿ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next