Advertisement
ನಿಜವೆಂದರೆ ಉಡುಪಿ ಭಾಗದಲ್ಲಿ ದೀಪಾವಳಿಯ ಆರಂಭಕ್ಕೂ ಮೊದಲೇ ಹಿರಿಯರನ್ನು ನೆನಪಿಸಿ ಕೊಳ್ಳುವ ಪರಿಪಾಠವಿದೆ. ನರಕ ಚತುರ್ದಶಿಯ ಮುನ್ನಾದಿನ ರಾತ್ರಿಯೇ ಮೃತಪಟ್ಟವರ ಹಬ್ಬ (ಸೈತಿನಕ್ಲೆನ ಪರ್ಬ) ಆಚರಿಸಲಾಗುತ್ತದೆ. ಹಿರಿಯರ ನೆನಪಿನಲ್ಲಿ ಎಡೆ ಇಡುವುದು ನರಕ ಚತುರ್ದಶಿ ಮತ್ತು ಅಮಾವಾಸ್ಯೆಯ ದಿನವೂ ನಡೆಯುತ್ತದೆ.
ನರಕ ಚತುರ್ದಶಿಯ ಮುನ್ನಾ ದಿನ ರಾತ್ರಿ, ಮನೆಯಲ್ಲಿ ಹಿಂದೆ ಗತಿಸಿಹೋದವರ ನೆನಪಿನಲ್ಲಿ ಬಡಿಸುವ ಕಾರ್ಯಕ್ರಮವಿದೆ. ಅಂದರೆ ನಾವು ದೀಪಾವಳಿಯನ್ನು ಸಂಭ್ರಮಿಸುವ ಮೊದಲೇ ಹಿರಿಯರನ್ನು ನೆನಪಿಸಿಕೊಳ್ಳುವ ಕ್ರಮವಿದು. ಎಲೆ ಹಾಕಿ ಬಡಿಸಲಾಗುತ್ತದೆ. ಇದಕ್ಕೆ ಅರಶಿನ ಎಲೆ ಮತ್ತು ಹೆಬ್ಬಲಸು ಎಲೆಯ ಕಡುಬು ಅತ್ಯಂತ ಮುಖ್ಯ. ಅದರ ಜತೆಗೆ ಮೀನು, ಬಾಳೆ ದಿಂಡಿನ ಪದಾರ್ಥ ಇರುತ್ತದೆ. ಮಣ್ಣಿನ ಪಾತ್ರೆಯಲ್ಲಿ ನೀರು ಕಾಯಿಸಿ ಹಿರಿಯರಿಗೆ ಆಹ್ವಾನ ನೀಡಲಾಗುತ್ತದೆ. ಬಳಿಕ ಮನೆಯೊಳಗೆ ಎಲೆಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಇಡುತ್ತಾರೆ. ಅದಕ್ಕೆ ಆಹಾರ ಖಾದ್ಯಗಳನ್ನು ಬಡಿಸಲಾಗುತ್ತದೆ.
Related Articles
Advertisement
ಕೆಲವೆಡೆ ಮೂರು ದಿನ ಸ್ಮರಣೆದೀಪಾವಳಿ ಹಬ್ಬದ ಆರಂಭದ ಮುನ್ನಾ ದಿನ, ನರಕ ಚತುರ್ದಶಿ ಮತ್ತು ಅಮಾವಾಸ್ಯೆ ಈ ಮೂರೂ ದಿನಗಳಲ್ಲೂ ಹಿರಿಯರಿಗೆ ಬಡಿಸುವ ಪರಿಪಾಠ ತುಳುನಾಡಿನಲ್ಲಿ ಇದೆ. ಅದರಲ್ಲೂ ಮಾಂಸದ ಖಾದ್ಯ ಮಾಡಿದ್ದರೆ ಬಡಿಸುವುದು ಸಂಪ್ರದಾಯ. ತುಳು ನಾಡು ಅಳಿಯಕಟ್ಟಿನ ನಡಾವಳಿ ಹೊಂದಿದ ಭಾಗವಾಗಿದ್ದರಿಂದ ಮನೆಯ ಮಹಿಳೆಯ ಕುಟುಂಬದವರಿಗೆ ಒಳಗೂ, ಗಂಡ ತೀರಿಕೊಂಡಿದ್ದರೆ ಅವರ ಪ್ರೇತಕ್ಕೆ ಹೊರಗೆ ಬಡಿಸುವ ಕ್ರಮ ಕೆಲವು ಕಡೆ ಇದೆ. ಏನೆಂದು ಪ್ರಾರ್ಥಿಸಲಾಗುತ್ತದೆ?
ಹಿರಿಯರೇ ಬಿಸಿ ನೀರಲ್ಲಿ ಮಿಂದು ಮಡಿಯಾಗಿಕೊಳ್ಳಿ. ಮಡಿ ಬಟ್ಟೆ ತೊಟ್ಟು ನೀಡಿದ ಆತಿಥ್ಯವನ್ನು ಸ್ವೀಕರಿಸಿ, ಮನೆಗೆ ಒಳಿತಾಗಲಿ ಎಂದು ಆಶೀರ್ವಾದ ಮಾಡಿ ಎಂದು ಮನೆಯ ಹಿರಿಯರು ಪ್ರಾರ್ಥಿಸುತ್ತಾರೆ. ಅನಂತರ ಕೆಲವು ಹೊತ್ತು ಬಾಗಿಲು ಓರೆ ಮಾಡಿ ಹೊರಗೆ ಹೋಗಿ ವಾಪಸ್ ಬಂದು ಎಡೆ ಜಾರಿಸಲಾಗುತ್ತದೆ. ಮುಂದಿನ ಜನಾಂಗಕ್ಕೆ ದಾಟಿಸುವ ಕಾರ್ಯವಾಗಲಿ
ಕೆಲವು ಸಮುದಾಯದಲ್ಲಿ ಇಂತಹ ಆಚರಣೆ ಪದ್ಧತಿ ತಲಾಂತರದಿಂದ ನಡೆದುಕೊಂಡು ಬಂದು ಈಗಲೂ ಮುಂದುವರಿದಿದೆ. ಇದು ತುಳುನಾಡಿನಲ್ಲಿ ಮಾತ್ರ ಕಾಣಲು ಸಾಧ್ಯ. ಹಿರಿಯರನ್ನು ಸ್ಮರಿಸುವುದು ದೀಪಾವಳಿ ಸಂದರ್ಭ ನಡೆದುಕೊಂಡು ಬರುವ ಪದ್ಧತಿ. ಇಂದಿನ ಯುವ ಜನಾಂಗಕ್ಕೆ ಇಂತಹ ಆಚರಣೆಗಳ ಬಗ್ಗೆ ತಿಳಿವಳಿಕೆ ಕಡಿಮೆ. ತಿಳಿಯುವಂತಾಗಬೇಕು ಮತ್ತು ಮುಂದಿನ ಜನಾಂಗಕ್ಕೆ ನಮ್ಮ ಪೂರ್ವಕಾಲದ ಆಚರಣೆ ದಾಟಿಸುವ ಕಾರ್ಯ ಆಗಬೇಕಿದೆ.
-ಬಾಬು ಅಮೀನ್ ಬನ್ನಂಜೆ, ಹಿರಿಯ ಜನಪದ ವಿದ್ವಾಂಸ -ಬಾಲಕೃಷ್ಣ ಭೀಮಗುಳಿ