ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಅನಧಿಕೃತ ಐಎಸ್‌ಐ ಮಾರ್ಕ್ ಇಲ್ಲದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಮಾಡಲು ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಲಾಗಿದೆ. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಇಲಾಖೆ ಆದೇಶ ಹಿನ್ನೆಲೆ ಘಟಕಗಳಿಗೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.
ಎರಡ್ಮೂರು ದಿನಗಳಿಂದ ಪಟ್ಟಣದಲ್ಲಿ 13 ಶುದ್ಧ ಕುಡಿಯುವ ನೀರಿನ ಘಟಕಗಳು ಬಂದಾದ್ದರಿಂದ ಕುಡಿಯುವ ನೀರಿಗೆ ಪರಿತಪಿಸುವಂತಹ ಸ್ಥಿತಿ ಎದುರಾಗಿದೆ. ಅಧಿಕೃತ ಐಎಸ್‌ಐ ಮಾರ್ಕ್ ಹೊಂದಿರುವ ಕಮತಿಗಿ ಶರಣಗೌಡ ಮಾಲೀಕತ್ವ ಸಾಯಿ ಶುದ್ಧ ಕುಡಿಯುವ ನೀರಿನ ಘಟಕ ಒಂದೇ ಆರಂಭವಿದೆ. ಐಎಸ್‌ಐ ಮಾರ್ಕ್ ಇಲ್ಲದೇ ಅನಧಿಕೃತ ನೀರು ಪೂರೈಸುತ್ತಿರುವ ಘಟಕ ಮಾಲೀಕರ ವಿರುದ್ಧ ತಡವಾಗಿ ಚುಕುರು ಮುಟ್ಟಿಸಲು ಅಧಿಕಾರಿಗಳು ಮುಂದಾಗಿದ್ದು, ಕೆಟ್ಟ ಮೇಲೆ ಬುದ್ಧಿಬಂತು ಎಂಬಂತಾಗಿದೆ.
ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಒಟ್ಟು 26 ಅನಧಿಕೃತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆಗೆಯಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿರುವ 13 ಘಟಕಗಳು ಬಂದಾಗಿವೆ. ಇನ್ನುಳಿದ ಗ್ರಾಮೀಣ ಭಾಗದ 13 ಘಟಕಗಳು ಪ್ರಾರಂಭಗೊಂಡಿವೆ. ಪರವಾನಗಿ ಇಲ್ಲದೇ ಇಷ್ಟು ವರ್ಷಗಳ ಕಾಲ ಜನರಿಗೆ ನೀರು ಪೂರೈಸಿದ ಮಾಲೀಕರ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕಲಾಗಿದೆ.
ಕುರ್ಕಿಹಳ್ಳಿ, ಜಾಲಹಳ್ಳಿ, ಸಿರವಾರ ಕ್ರಾಸ್, ಗೋಪಾಳಪುರು, ಬಿ.ಗಣೇಕಲ್, ಜಾ.ಜಾಡಲದಿನ್ನಿ, ಮಸರಕಲ್, ಕಾಕರಗಲ್, ಹಿರೇಬೂದೂರು, ಗಬ್ಬೂರು ಸೇರಿ ಇತರೆ ಹಳ್ಳಿಗಳು- ಪಟ್ಟಣ ವ್ಯಾಪ್ತಿ ಅನಧಿಕೃತ ಐಎಸ್‌ಐ ಮಾರ್ಕ್ ಇಲ್ಲದ 13 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಸ್ಥಗಿತಗೊಳಿಸಲು ಆಹಾರ ಸುರಕ್ಷಿತ ಹಾಗೂ ಗುಣಮಟ್ಟ ಪ್ರಾಧಿಕಾರ ಇಲಾಖೆಯಿಂದ ಆದೇಶಿಸಲಾಗಿದೆ. ಅನಧಿಕೃತ ಐಎಸ್‌ಐ ಮಾರ್ಕ್ ಇಲ್ಲದ 26 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಸ್ಥಗಿತಗೊಳಿಸಲು ಆಹಾರ ಸುರಕ್ಷತ ಪ್ರಾಧಿಕಾರ ಇಲಾಖೆಯಿಂದ ಆದೇಶ ಬಂದ ಹಿನ್ನೆಲೆ ಪಟ್ಟಣದ 13 ಘಟಕಗಳಿಗೆ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ. ಇನ್ನುಳಿದ ಹಳ್ಳಿಗಳಲ್ಲಿರುವ ಘಟಕಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.
-ಕಳಕಪ್ಪ, ಜೆಸ್ಕಾಂ ಇಲಾಖೆ ಎಇಇ