ಬೆಂಗಳೂರು: ನಗರದ ಸ್ವಚ್ಛತೆ, ಆರೋಗ್ಯಕ್ಕೆ ಆದ್ಯತೆ ನೀಡಿರುವ ಬಿಬಿಎಂಪಿ ಚಾಮರಾಜಪೇಟೆ ವಿಭಾಗದ 6 ವಾರ್ಡ್ ಹಾಗೂ ಗಾಂಧಿನಗರ ವಿಭಾಗದ 3 ವಾರ್ಡ್ ಸೇರಿದಂತೆ 9 ವಾರ್ಡ್ಗಳಿಂದ ಉತ್ಪತ್ತಿ ಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿ ಮಾಡುವ ಯೋಜನೆ ರೂಪಿಸಿದೆ.
ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಗಳನ್ನು ಬಿನ್ನಿಮಿಲ್ ರಸ್ತೆಯ ಛಲವಾದಿ ಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ 12.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಗುರುವಾರ ನೂತನ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಪ್ರತಿದಿನ 150 ರಿಂದ 200 ಮೆ.ಟನ್ ನಷ್ಟು ತಾಜ್ಯ ನಿರ್ವಹಣೆ ಮಾಡುವ 3 ಟ್ರಾನ್ಸ್ಫರ್ ಸ್ಟೇಷನ್ ಸ್ಥಾಪಿಸಲು 40 ಕೋಟಿ ರೂ. ಮೊತ್ತವನ್ನು ನಿಗದಿಪಡಿಸ ಲಾ ಗಿ ದೆ. ಈಜಿಪುರದಲ್ಲಿ ಈಗಾಗಲೇ ಘಟಕ ಕಾರ್ಯ ನಿರ್ವಹಿಸುತ್ತಿದೆ. ಛಲವಾದಿಪಾಳ್ಯ ಘಟಕ್ಕೂ ಚಾಲನೆ ದೊರೆತಿದೆ. ಹೆಚ್ಬಿಆರ್ ಬಡಾವಣೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, 2025ರ ಜನವರಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಪ್ರತಿ ಗಂಟೆಗೆ 5 ಮೆ.ಟನ್ ತಾಜ್ಯ ವಿಗಂಡಣೆ:
ಪ್ರಸ್ತುತ ತ್ಯಾಜ್ಯವನ್ನು ಪ್ರಾಥಮಿಕ ಸಂಗ್ರಹಣಾ ವಿಧಾನವನ್ನು ಆಟೋಗಳ ಮೂಲಕ ಮಾಡಲಾಗುತ್ತಿದೆ. ರಸ್ತೆ ಬದಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿನ ತ್ಯಾಜ್ಯ ನಿರ್ವಹಣೆಯನ್ನು ಸಾಗಣೆ ವಾಹನಗಳ ಮೂಲಕ ನಿರ್ವಹಿಸಲಾಗುತ್ತಿದೆ. ಸುದೀರ್ಘವಾಗಿ ಒಂದೇ ಸ್ಥಳದಲ್ಲಿ ತ್ಯಾಜ್ಯ ವರ್ಗಾವಣೆ ಮಾಡುತ್ತಿರುವುದರಿಂದ ತ್ಯಾಜ್ಯ ಮತ್ತು ಲೀಚೆಟ್ ಸೋರಿಕೆ ಉಂಟಾಗಿ ಈ ಸ್ಥಳಗಳು ಬ್ಲಾಕ್ ಸ್ಪಾಟ್ಗಳಾಗಿ ಮಾರ್ಪಾಡಾಗುತ್ತಿದೆ. ಇದನ್ನು ನಿವಾರಣೆ ಮಾಡಲು ನೂತನ ಘಟಕ ನೆರವಾಗಲಿದೆ. ಪ್ರತಿ ಗಂಟೆಗೆ 5 ಮೆ.ಟನ್ ತ್ಯಾಜ್ಯ ವಿಂಗಡಣೆಯಾಗುವ ಅಂದರೆ ಪ್ರತಿದಿನ 40 ಟನ್ ತ್ಯಾಜ್ಯವು ವಿಂಗಣೆಯಾಗುವ ಸಾಮರ್ಥ್ಯದ 2 ಘಟಕಗಳನ್ನು ನಿರ್ಮಿಸಿ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಚಾಮರಾಜಪೇಟೆಯ 6 ವಾರ್ಡ್ ಮತ್ತು ಗಾಂಧಿನಗರದ 3 ವಾರ್ಡ್ಗಳಿಂದ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಕೆಲಸ ನಡೆದಿದೆ ಎಂದರು. ಈ ವೇಳೆ ಸಚಿವರಾದ ಜಮೀರ್ ಅಹಮದ್, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ. ಸುಧೀಂದ್ರ, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.