Advertisement

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

05:16 AM Dec 19, 2024 | Team Udayavani |

ಮಂಗಳೂರು: ಸಾಲಗಾರನೋರ್ವನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ನಗರದ ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರನ್ನು ಬಂಧಿಸಲಾಗಿದೆ.

Advertisement

ಬ್ಯಾಂಕ್‌ನಿಂದ ಸಾಲ ಪಡೆದಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಟಿನ್ಹೋ ಪದವಿನ ನಿವಾಸಿ ಮನೋಹರ್‌ ಪಿರೇರಾ(47) ಅವರು ಮಂಗಳವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತನ್ನ ಆತ್ಮಹತ್ಯೆಗೆ ಬ್ಯಾಂಕ್‌ ಅಧ್ಯಕ್ಷರೇ ಹೊಣೆ ಎಂಬುದಾಗಿ ವೀಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಅನಿಲ್‌ ಲೋಬೋರನ್ನು ಬಂಧಿಸಲಾಗಿದೆ.

ಮನೋಹರ್‌ ಪಿರೇರಾ ತನ್ನ ತಮ್ಮ ಜೀವನ್‌ ಪಿರೇರಾ ಅವರೊಂದಿಗೆ ವಾಸವಿದ್ದರು. ಮನೋಹರ್‌ 10 ವರ್ಷಗಳ ಹಿಂದೆ ಬ್ಯಾಂಕ್‌ನಿಂದ ಸಾಲ ಪಡೆದು ಮನೆ ಖರೀದಿಸಿದ್ದರು. ಮೆಲ್ಕಮ್‌ ಅವರು ತಮ್ಮ ಮನೋಹರ್‌ ಪಿರೇರಾ ಅವರ ಮೂಲಕ ಸಾಲದ ಕಂತು ಪಾವತಿಸುತ್ತಿದ್ದರು. ಕೋವಿಡ್‌ ಸಂದರ್ಭದಲ್ಲಿ ಪಾವತಿಸಿರಲಿಲ್ಲ. ಹಾಗಾಗಿ ಬ್ಯಾಂಕ್‌ನವರು ಎರಡು ವರ್ಷಗಳ ಹಿಂದೆ ಮನೆಯನ್ನು ಜಫ್ತಿ ಮಾಡಿದ್ದರು. ಇದರಿಂದಾಗಿ ಮನೋಹರ್‌ ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ ಎರಡು ಬಾರಿ ಹೃದಯಾಘಾತಕ್ಕೂ ಒಳಗಾಗಿದ್ದರು.

2023ರ ಫೆಬ್ರವರಿಯಲ್ಲಿ ಸಿಸ್ಟರ್‌ ಕ್ರಿಸ್ಟಿನ್‌ ಅವರು ಅವರ ಚಾರಿಟಿಯಿಂದ 15 ಲ.ರೂ.ಗಳನ್ನು ಮನೋಹರ್‌ ಅವರ ಬ್ಯಾಂಕ್‌ ಖಾತೆಗೆ ಕಳುಹಿಸಿದ್ದರು. ಮನೋಹರ್‌ ಅವರು ಬ್ಯಾಂಕ್‌ ಅಧ್ಯಕ್ಷರೊಂದಿಗೆ ಮಾತನಾಡಿ ಸೆಲ್ಫ್ ಚೆಕ್‌ ನೀಡಿದ್ದರು. ಅನಂತರ ಜಪ್ತಿ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ವಾಪಸ್‌ ನೀಡಲಾಗಿತ್ತು. ಆದರೆ 15 ಲ.ರೂ.ಗಳಲ್ಲಿ 9 ಲ.ರೂ.ಗಳನ್ನು ಅಧ್ಯಕ್ಷರು ಸೆಲ್ಫ್ ಚೆಕ್‌ ವಿತ್‌ಡ್ರಾ ಮಾಡಿದ್ದಾರೆ. ಹಾಗಾಗಿ ಪೂರ್ಣವಾಗಿ ಸಾಲ ಮರುಪಾವತಿಯಾಗಲಿಲ್ಲ ಎನ್ನಲಾಗಿದೆ.

ಮನೋಹರ್‌ ಅವರ ಸಹೋದರ ಜೀವನ್‌ ಪಿರೇರಾ ನೀಡಿರುವ ಈ ದೂರಿನಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 108ರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

ಬ್ಯಾಂಕ್‌ ಬಗ್ಗೆ ತಪ್ಪು ಹೇಳಿಕೆ: ಎಂಸಿಸಿ ಬ್ಯಾಂಕ್‌ ಸ್ಪಷ್ಟನೆ
ಆತ್ಮಹತ್ಯೆ ಪ್ರಕರಣದಲ್ಲಿ ಅನಾವಶಕ್ಯಕವಾಗಿ ಬ್ಯಾಂಕ್‌ ಹಾಗೂ ಬ್ಯಾಂಕ್‌ ಅಧ್ಯಕ್ಷರ ಹೆಸರನ್ನು ಬಳಸಿ ತಪ್ಪು ಹೇಳಿಕೆ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಬ್ಯಾಂಕಿನ ಗ್ರಾಹಕರು ಕಿವಿಗೊಡಬಾರದು. ವ್ಯಕ್ತಿಯೊಬ್ಬರು ಬ್ಯಾಂಕ್‌ನಿಂದ ಸಾಲ ಪಡೆದಿದ್ದು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡದಿರುವ ಕಾರಣ ಸಾಲ ವಸೂಲಾತಿಗಾಗಿ ಕಾನೂನಿನ ಅವಕಾಶದಡಿ ಕ್ರಮ ಕೈಗೊಳ್ಳಲಾಗಿತ್ತು.

ಸಾಲಗಾರರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಸಾಲ ಮರುಪಾವತಿಗೆ ಒಂದು ಅವಕಾಶ ನೀಡಲಾಗಿತ್ತು. ಆದರೂ ಮರುಪಾವತಿ ಮಾಡಿರಲಿಲ್ಲ. ಸಾಲಗಾರರು ತಮ್ಮ ಉಳಿತಾಯ ಖಾತೆಯನ್ನು ವೈಯಕ್ತಿಕ ನೆಲೆಯಲ್ಲಿ ವ್ಯವಹರಿಸುತ್ತಿದ್ದು,ಅದರಲ್ಲಿ ಯಾರೂ ಮಧ್ಯಪ್ರವೇಶಿಸಿಲ್ಲ. ಅವರು ತಮ್ಮ ವೈಯಕ್ತಿಕ ಸಮಸ್ಯೆಯಿಂದ ಕೃತ್ಯ ಎಸಗಿದ್ದಾರೆ ಎಂದು ಎಂಸಿಸಿ ಬ್ಯಾಂಕ್‌ನ ಮಹಾಪ್ರಬಂಧಕ ಸುನಿಲ್‌ ಮಿನೇಜಸ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next