Advertisement
ಸರಕಾರದ ಅಂಕಿ-ಅಂಶಗಳ ಪ್ರಕಾರ ಹೇಳುವುದಾದರೆ, ಮೂರು ತಿಂಗಳುಳಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ 250 ಮಿಲಿಯನ್ ಯುನಿಟ್ ಆಸುಪಾಸಿನಲ್ಲೇ ಇದೆ. ಅದರಂತೆ ಬುಧವಾರ (ಅ. 11) ರಾಜ್ಯದಲ್ಲಿ ವಿದ್ಯುತ್ ಬೇಡಿಕೆ 257.08 ದಶಲಕ್ಷ ಯೂನಿಟ್ ಇದ್ದು, ಪೀಕ್ ಲೋಡ್ 14,448 ಮೆ.ವಾ. ಇದೆ. ಇದೇ ದಿನ ಸೆಪ್ಟಂಬರ್‌ನಲ್ಲಿ 245.2 ದಶಲಕ್ಷ ಯೂನಿಟ್ ಇದ್ದು, ಪೀಕ್ ಲೋಡ್ 13,630 ಮೆ.ವಾ. ಇತ್ತು. ಆಗಸ್ಟ್‌ನಲ್ಲಿ ಇದೇ ಅವಧಿಯಲ್ಲಿ 253.40 ದಶಲಕ್ಷ ಯೂನಿಟ್ ಇದ್ದು, ಪೀಕ್ ಲೋಡ್ 15,233 ಮೆ.ವಾ. ಇತ್ತು. ಜೂನ್‌ನಲ್ಲಿ ಬೇಡಿಕೆ 225 ದಶಲಕ್ಷ ಯೂನಿಟ್ ದಾಖಲಾಗಿದೆ (ಸಾಮಾನ್ಯವಾಗಿ ಆ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಇನ್ನೂ ಸಮರ್ಪಕವಾಗಿ ಆರಂಭವಾಗಿರುವುದಿಲ್ಲ).
ಸಾಮಾನ್ಯವಾಗಿ “ರಿಯಲ್ ಟೈಮ್’ ಮಾರುಕಟ್ಟೆಯಲ್ಲಿ 250ರಿಂದ 300 ಮೆ.ವಾ. ವಿದ್ಯುತ್ ಕೊರತೆಯನ್ನು ನೀಗಿಸಲು ಸಾಧ್ಯವಿದೆ. ಅಬ್ಬಬ್ಟಾ ಎಂದರೆ 400 ಮೆ.ವಾ. ಅನ್ನು ಹೆಣಗಾಡಿ ನಿಭಾಯಿಸಬಹುದು. ಆದರೆ ರಾಜ್ಯದಲ್ಲಿ ಕೊರತೆ ಇರುವುದು 1,500ರಿಂದ 2,000 ಮೆ.ವಾ. ಈ ನಡುವೆ ನೆರೆ ರಾಜ್ಯಗಳಲ್ಲೂ ಮಳೆ ಕೊರತೆ ಜತೆಗೆ ವಿದ್ಯುತ್ ಬೇಡಿಕೆ ಹೆಚ್ಚಿದೆ. ಹೀಗೆ ಎಲ್ಲೆಡೆಯಿಂದ ಬೇಡಿಕೆ ಕೇಳಿಬರುವುದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಅದರ ಬೆಲೆ ಕೂಡ ಏರಿಕೆಯಾಗುತ್ತದೆ. ಹಾಗಾಗಿ, ರಾಜ್ಯಕ್ಕೆ ತಾನು ನಿರೀಕ್ಷಿಸಿದ ಬೆಲೆಯಲ್ಲಿ ವಿದ್ಯುತ್ ಸಿಗುವುದಿಲ್ಲ. ಏನು ಮಾಡಬಹುದಿತ್ತು?
ಸರಕಾರ ಮೊದಲೇ ಎಚ್ಚೆತ್ತು ಜೂನ್‌ನಲ್ಲೇ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವ ರಾಜ್ಯಗಳೊಂದಿಗೆ ಪರಿಣಾಮಕಾರಿಯಾಗಿ ವಿನಿಮಯ ಮಾಡಿಕೊಳ್ಳಬಹುದಿತ್ತು. ಅದೇ ಸಮಯದಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಮೊರೆಹೋಗಿ, ಮಾರುಕಟ್ಟೆಯಲ್ಲಿ ಟ್ರೆಂಡ್ ಯಾವ ರೀತಿ ಇದೆ ಎಂಬುದನ್ನು ಅರಿತು ದೀರ್ಘಾವಧಿಗೆ ವಿದ್ಯುತ್ ಖರೀದಿಗೆ ಒಡಂಬಡಿಕೆ ಮಾಡಿಕೊಳ್ಳಬಹುದಿತ್ತು. ವಿದ್ಯುತ್ ಸಮಸ್ಯೆಯ ಗಂಭೀರತೆಯನ್ನು ಅರಿತು ಆರಂಭದಲ್ಲೇ ವಿದ್ಯುತ್ಛಕ್ತಿ ಕಾಯ್ದೆ- 2003ರ ಸೆಕ್ಷನ್ 11 ಅನ್ನು ಆಗಲೇ ಜಾರಿಗೊಳಿಸಬಹುದಿತ್ತು. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ವಿದ್ಯುತ್ ಉತ್ಪಾದಕರು ಬೇರೆ ಮಾರಾಟ ಮಾಡಲು ಬರುವುದಿಲ್ಲ. ಇದ್ಯಾವ ಪ್ರಯತ್ನಗಳಿಗೂ ಸರಕಾರ ಮುಂದಾಗಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
Related Articles
ಪಂಜಾಬ್ ಮತ್ತು ಉತ್ತರ ಪ್ರದೇಶದೊಂದಿಗೆ ವಿದ್ಯುತ್ ವಿನಿಮಯ ಒಪ್ಪಂದ ನವೀಕರಣವು ಸರಕಾರವನ್ನು ತಕ್ಕಮಟ್ಟಿಗೆ ಬೀಸೋ ದೊಣ್ಣೆಯಿಂದ ತಪ್ಪಿಸಿದೆ. ಕಳೆದ ಅಕ್ಟೋಬರ್‌ನಲ್ಲೇ ಪಂಜಾಬ್ ಮತ್ತು ಉತ್ತರ ಪ್ರದೇಶದೊಂದಿಗೆ ವಿದ್ಯುತ್ ವಿನಿಮಯಕ್ಕೆ ಒಡಂಬಡಿಕೆ ಆಗಿತ್ತು. ಈಗ ಆ ಒಪ್ಪಂದ ನವೀಕರಿಸಲಾಗಿದೆ. ಪರಿಣಾಮ ಎರಡೂ ರಾಜ್ಯಗಳಿಂದ ಕ್ರಮವಾಗಿ 300-600 ಮೆ.ವಾ. ಮತ್ತು 500 ಮೆ.ವಾ. ದೊರೆಯುತ್ತಿದೆ.
Advertisement
*ವಿಜಯ ಕುಮಾರ ಚಂದರಗಿ