Advertisement

Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್‌ ಕಾಂಚನ್‌

02:53 AM Dec 13, 2024 | Team Udayavani |

ಉಡುಪಿ: ರಾಜ್ಯ ಸರಕಾರದ ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸಬೇಕು. ಸೌಲಭ್ಯ ದೊರಕದ ಅರ್ಹ ಅರ್ಜಿದಾರರ ಪಟ್ಟಿಯನ್ನು ಸಿದ್ಧಪಡಿಸಿ, ಸೌಲಭ್ಯ ಒದಗಿಸ ಬೇಕು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್‌ ಕಾಂಚನ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಜಿ.ಪಂ. ಕಚೇರಿಯಲ್ಲಿ ಗುರುವಾರ ಜರಗಿದ ಸಮಿತಿಯ ಮೊದಲ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಸಭೆಗೆ ಅಧಿಕಾರಿ ಗಳು ಅಗತ್ಯ ಮಾಹಿತಿಯೊಂದಿಗೆ ಬರಬೇಕು. ಅರ್ಹರಿಗೆ ಯೋಜನೆ ತಲುಪದೆ ಇರಲು ಇರುವ ಕಾರಣ ಪತ್ತೆಹಚ್ಚಿ ಸಮಿತಿಯ ಗಮನಕ್ಕೆ ತರಬೇಕು. ಆಗ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಅಥವಾ ಸಮಿತಿಯ ರಾಜ್ಯ ಅಧ್ಯಕ್ಷರೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ತಿಳಿಸಿದರು.

ಸಭೆಗೆ ಆಗಮಿಸದ ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಭೆಯಲ್ಲಿ ಅಧಿಕಾರಿಗಳು ಖುದ್ದು ಹಾಜರಾಗಿ ಮಾಹಿತಿ ನೀಡಬೇಕು. ಮುಂದಿನ ಬಾರಿ ಮೇಲಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕು. ಯುವ ನಿಧಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಕೆಲವರಿಗೆ ತಲುಪು ತ್ತಿಲ್ಲ ಎಂಬ ದೂರುಗಳಿದ್ದು, ಪರಿಹರಿಸಬೇಕು ಎಂದರು.

ಯುವನಿಧಿ ಸಂಬಂಧ ವಿಶ್ವವಿದ್ಯಾಲಯದ ಅಂಕಪಟ್ಟಿ ಅಪ್‌ಲೋಡ್‌ ತಡವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕುಲಪತಿಯವರಿಗೆ ಪತ್ರ ಬರೆದಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ತಿಳಿಸಿದರು. ರೇಷನ್‌ ಕಾರ್ಡ್‌ ಸಮಸ್ಯೆಯಿಂದ 15 ಕೊರಗ ಹಾಗೂ ಮಲೆಕುಡಿಯ ಸಮುದಾಯದ ಕೆಲವರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದರು.

ತಾಲೂಕಿನಲ್ಲಿ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ 42,175 ರ ಪೈಕಿ 39,823 ಮಂದಿಗೆ 7.96 ಕೋ.ರೂ. ಮೊತ್ತವನ್ನು ಹಿಂದಿನ ತಿಂಗಳು ಪಾವತಿಸಲಾಗಿದೆ. 29,878 ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ದಾರರಲ್ಲಿ 27,324 ಮಂದಿಗೆ ಅನ್ನಭಾಗ್ಯ ಸೌಲಭ್ಯ ತಲುಪಿಸಲಾಗಿದೆ. ಮಣಿಪಾಲ ವ್ಯಾಪ್ತಿಯಲ್ಲಿ 30,166, ಉಡುಪಿ ವ್ಯಾಪ್ತಿಯಲ್ಲಿ 27,998 ಗ್ರಾಹಕರಿಗೆ ಗೃಹಜ್ಯೋತಿ ಸೌಲಭ್ಯ ಲಭಿಸಿದೆ. 45 ರಲ್ಲಿ 453 ಮಂದಿಗೆ ಯುವನಿಧಿ ದೊರೆತಿದೆ ಎಂದು ಅಧಿಕಾರಿಗಳು ವಿವರಿಸಿದರು. ಸದಸ್ಯರು ಸ್ಥಳೀಯವಾಗಿ ಆಗುತ್ತಿರುವ ಸಮಸ್ಯೆ ಬಗ್ಗೆ ಗಮನಸೆಳೆದರು. ತಾಪಂ ಇಒ ವಿಜಯಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next