Advertisement

ಪಿರಿಯಾಪಟ್ಟಣ; ಗ್ರಾಪಂ ಗದ್ದುಗೆಗಾಗಿ ಪೈಪೋಟಿ; ಮೋಜು-ಮಸ್ತಿಗೆ ಮೊರೆ ಹೋದ ಸದಸ್ಯರು

10:45 AM Jun 27, 2023 | Team Udayavani |

ಪಿರಿಯಾಪಟ್ಟಣ: ತಾಲ್ಲೂಕಿನ 34 ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಈಗಾಗಲೇ 2 ನೇ ಅವಧಿಯ ಅಧಿಕಾರಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೀಸಲಾತಿ ಪ್ರಕಟಿಸಲಾಗಿದೆ.

Advertisement

ಕ್ಷೇತ್ರದ ಜನಪ್ರತಿಧಿಗಳು, ಹಾಲಿ ಮಾಜಿ ಶಾಸಕರು, ವಿವಿಧ ಪಕ್ಷದ ಮುಖಂಡರು ಸತಾಯಗತಾಯ ಪಂಚಾಯಿತಿಯ ಅಧಿಕಾರ ಹಿಡಿಯಲೇಬೇಕು ಎಂದು ತಮ್ಮ ಬೆಂಬಲಿಗರ ಮುಖಾಂತರ ಗ್ರಾಪಂ ಸದಸ್ಯರನ್ನು ಕಟ್ಟಿಹಾಕುವ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ.

ಟೆಂಪಲ್ ರನ್, ಮೋಜು ಮಸ್ತಿ:
ಈಗಾಗಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ತಂಡದೊಂದಿಗೆ ಟೆಂಪಲ್ ರನ್ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಟ್ರಿಪ್ ಮಾಡುತ್ತಾ ಗುಂಡುತುಂಡಿನ ಪಾರ್ಟಿ ಮಾಡುತ್ತಿದ್ದರೆ, ಕೆಲವೆಡೆ ಮಹಿಳಾ ಸದಸ್ಯರಿರುವ ಜಾಗದಲ್ಲಿ ಅವರ ಗಂಡಂದಿರು ಟ್ರಿಪ್, ಪಾರ್ಟಿ ಹಾಗೂ ಹಣಕ್ಕಾಗಿ ಬೇಡಿಕೆ ಹಿಡುವುದು. ಮತ್ತೆ ಕೆಲವರು ಅಧಿಕಾರದ ಹಾಗೂ ವೈಯಕ್ತಿಕ ಆಸೆಗಳಿಗಾಗಿ ಸ್ವಯಂ ಪ್ರೇರಿತವಾಗಿ ಪಕ್ಷಾಂತರ ಮಾಡುತ್ತಿರುವುದು. ಮತ್ತೆ ಕೆಲವೆಡೆ ಸಮಬಲವಿರುವ ಕಡೆಗಳಲ್ಲಿ ಅಧಿಕಾರಕ್ಕಾಗಿ ಮನವೊಲಿಸುವ, ಕಿಡ್ನಾಪ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

ವರ್ಗವಾರು ಮೀಸಲಾತಿ:
ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಪೈಕಿ, 6 ಅಧ್ಯಕ್ಷ ಸ್ಥಾನಗಳು ಪರಿಶಿಷ್ಟ ಜಾತಿಗೆ ಮೀಸಲಿದ್ದು, ಇದರಲ್ಲಿ ಚಪ್ಪರದಹಳ್ಳಿ, ಚಿಕ್ಕನೇರಳೆ, ಮಾಕೋಡು ಗ್ರಾಪಂ ಎಸ್ಸಿ ಮಹಿಳೆಗೆ ಮೀಸಲಾಗಿದ್ದರೆ ಕಿತ್ತೂರು, ರಾಮನಾಥ ತುಂಗಾ ಹಾಗೂ ಕಂಪಲಾಪುರ ಗ್ರಾಪಂ ಎಸ್ಸಿ ಸಾಮಾನ್ಯ ಕ್ಷೇತ್ರವಾಗಿವೆ ಅದೇ ರೀತಿ ಹುಣಸವಾಡಿ, ಚೌತಿ, ಹಾಗೂ ಕೋಮಲಾಪುರ ಗ್ರಾಪಂಗಳು ಎಸ್ಸಿ ಮಹಿಳೆಗೆ ಮೀಸಲಿದ್ದರೆ, ಕಣಗಾಲು, ಆವರ್ತಿ ಮತ್ತು ಪಂಚವಳ್ಳಿ ಕ್ಷೇತ್ರಗಳು ಎಸ್ಸಿ ಸಾಮಾನ್ಯ ಕ್ಷೇತ್ರಗಳಾಗಿವೆ. ಇನ್ನು ರಾವಂದೂರು, ಕಿರನಲ್ಲಿ ಗ್ರಾಪಂ ಎಸ್ಟಿ ಮಹಿಳೆಗೆ ಮೀಸಲಿದ್ದರೆ ಹರದೂರು ಎಸ್ಟಿ ಸಾಮಾನ್ಯಕ್ಕೆ ಮೀಸಲಿದೆ ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನಗಳಿಗೆ ಹಲಗನಹಳ್ಳಿ, ಭುವನಹಳ್ಳಿ ಎಸ್ಟಿ ಮಹಿಳೆಗೆ, ಚನ್ನಕಲ್ ಕಾವಲ್ ಗ್ರಾಪಂ ಎಸ್ಟಿ ಸಾಮಾನ್ಯ ಕ್ಷೇತ್ರವಾಗಿದೆ. ಬಿಸಿಎಂ  ಎ ಅಧ್ಯಕ್ಷ ಸ್ಥಾನದ ಮಹಿಳಾ ಕ್ಷೇತ್ರಗಳಾಗಿ ಚಿಟ್ಟೇನಹಳ್ಳಿ, ಹಂಡಿತವಳ್ಳಿ ಹಾಗೂ ಆವರ್ತಿ ಕ್ಷೇತ್ರಗಳಿದ್ದರೆ ಚೌತಿ, ಅತ್ತಿಗೋಡು ಹಾಗೂ ದೊಡ್ಡಕಮರವಳ್ಳಿ ಬಿಸಿಎಂ ಎ ಸಾಮಾನ್ಯ ಕ್ಷೇತ್ರವಾಗಿವೆ.ಇನ್ನುಳಿದಂತೆ ಬಿಸಿಎಂ–ಎ ಉಪಾಧ್ಯಕ್ಷ ಸ್ಥಾನಗಳ ಪೈಕಿ ಬೆಟ್ಟದಪುರ, ಕಿತ್ತೂರು, ಕಂಪಲಾಪುರ, ಮಹಿಳೆಯರಿಗೆ ಮೀಸಲಿದ್ದರೆ, ರಾವಂದೂರು, ಬೆಟ್ಟದತುಂಗ, ದೊಡ್ಡಬ್ಯಾಲಾಳು ಬಿಸಿಎಂ ಎ ಸಾಮಾನ್ಯಕ್ಕೆ ಮೀಸಲಾಗಿದೆ. ಬಿಸಿಎಂ ಬಿ ಮಹಿಳಾ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿ ದೊಡ್ಡಬ್ಯಾಲಾಳು ಇದ್ದರೆ ಸಾಮಾನ್ಯ ಕ್ಷೇತ್ರವಾಗಿ ಹಲಗನಹಳ್ಳಿಯನ್ನು ಮೀಸಲಿಡಲಾಗಿದೆ. ಬಿಸಿಎಂ ಬಿ ಮಹಿಳಾ ಮೀಸಲಾಗಿ ಬೈಲುಕುಪ್ಪೆ ಬಿಸಿಎಂ ಬಿ ಸಾಮಾನ್ಯ ಕ್ಷೇತ್ರವಾಗಿ ಹಾರನಹಳ್ಳಿಯನ್ನು ನಿಗದಿಪಡಿಸಿದೆ.

17 ಸಾಮಾನ್ಯ ಕ್ಷೇತ್ರಗಳು
ಇನ್ನುಳಿದ 17 ಸಾಮಾನ್ಯ ಕ್ಷೇತ್ರಗಳ ಪೈಕಿ ಕಣಗಾಲು, ಎನ್.ಶಟ್ಟಹಳ್ಳಿ, ಬೆಟ್ಟದತುಂಗ, ಪಂಚವಳ್ಳಿ, ಮಾಲಂಗಿ, ಪುನಾಡಹಳ್ಳಿ, ನವಿಲೂರು, ಕೊಪ್ಪ, ಮಹಿಳೆಯರಿಗೆ ಮೀಸಲಿದ್ದರೆ, ಬೆಟ್ಟದಪುರ, ಭೂವನಹಳ್ಳಿ, ಕೋಮಲಾಪುರ, ಹಿಟ್ನೇಹೆಬ್ಬಾಗಿಲು, ಮುತ್ತೂರು, ಹುಣಸವಾಡಿ, ಬೈಲುಕುಪ್ಪೆ, ಹಾರನಹಳ್ಳಿ ಹಾಗೂ ಚನ್ನಕಲ್ ಕಾವಲು ಗ್ರಾಪಂಗಳನ್ನು ಸಾಮಾನ್ಯ ಕ್ಷೇತ್ರಗಳಾಗಿ ಮಾರ್ಪಟ್ಟಿವೆ. ಉಪಾಧ್ಯಕ್ಷ ಸ್ಥಾನದ ಮಹಿಳಾ ಕ್ಷೇತ್ರಗಳಾಗಿ ಅತ್ತಿಗೋಡು , ಹಂಡಿತವಳ್ಳಿ, ಹರದೂರು, ಹಿಟ್ನೇಹೆಬ್ಬಾಗಿಲು, ರಾಮನಾಥ ತುಂಗಾ, ಮುತ್ತೂರು, ಕೊಪ್ಪ, ದೊಡ್ಡಕಮರವಳ್ಳಿ ಮೀಸಲಿದ್ದರೆ ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಶೆಟ್ಟಹಳ್ಳಿ, ಮಾಕೋಡು, ಕಿರುನಲ್ಲಿ, ಮಾಲಂಗಿ, ಚಿಟ್ಟೇನಹಳ್ಳಿ, ಪುನಾಡಹಳ್ಳಿ, ನವಿಲೂರು, ಚಿಕ್ಕನೇರಳೆ ಹಾಗೂ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮೀಸಲಿಡಲಾಗಿದೆ.

Advertisement

ಗಂಡಂದಿರ ದರ್ಬಾರ್ ಗೆ ಅವಕಾಶ:
ಗ್ರಾಮ ಸ್ವರಾಜ್ ಹಾಗೂ ಪಂಚಾಯಿತ್ ರಾಜ್ ಅಧಿನಿಯಮದ ಪ್ರಕಾರ ಶೇ. 50 ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲಾಗಿದ್ದರೂ ತಾಲ್ಲೂಕಿನ 34 ಗ್ರಾಪಂಗಳಲ್ಲಿ 17 ಪಂಚಾಯಿತಿಗಳನ್ನು ಮಹಿಳೆಯರಿಗೆ ಮೀಸಲಾಗಿಡಲಾಗಿದೆ, ಮೀಸಲಾತಿ ಅನ್ವಯ ಮಹಿಳೆಯರಿಗೆ ಅಧ್ಯಕ್ಷರಾಗುವ ಸಿಕ್ಕರೂ, ಪತ್ನಿಯ ಹೆಸರಿನಲ್ಲಿ ಅವರ ಗಂಡಂದಿರು, ಮಕ್ಕಳು ದರ್ಬಾರ್ ಮಾಡಲು ಮತ್ತೊಂದು ಅವಕಾಶ ಕೊಟ್ಟಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಬಾರಿ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಕೆ.ಮಹದೇವ್ ಶಾಸಕರಿದ್ದರೂ ಕಾಂಗ್ರೆಸ್ ಪಕ್ಷದ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಪಂ ಅಧ್ಯಕ್ಷಗಾದಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೂ ಈಗ ಗ್ರಾಪಂ ಅಧ್ಯಕ್ಷರ ಚುನಾವಣೆಯ ಎರಡನೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ವೆಂಕಟೇಶ್ ರವರೆ ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿದ್ದಾರೆ ಆದ್ದರಿಂದ ಯಾರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯಿತಿಯ ಗದ್ದುಗೆ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

-ಪಿ.ಎನ್.ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next