ಕನಕಪುರ: ನರೇಗಾ ಕಾಮಗಾರಿಯ ಕಮಿಷನ್ ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದ ತೋಕಸಂದ್ರ ಪಿಡಿಒ ರಮ್ಯಾ ಅವರನ್ನು ಸೇವೆಯಿಂದ ಅಮಾನತು ಪಡಿಸಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಮರಳವಾಡಿಹೋಬಳಿಯ ತೋಕಸಂದ್ರ ಗ್ರಾಪ ಅಭಿವೃದ್ಧಿ ಅಧಿಕಾರಿ ರಮ್ಯಾ ಅವರು ಕಳೆದ ಜ.15ರಂದು ನರೇಗಾಯೋಜನೆಯಲ್ಲಿ ಚೆಕ್‌ಡ್ಯಾಂ ಕಾಮಗಾರಿ ಕೈಗೊಂಡಿದ್ದ ಸಿದ್ದೇಶ್ ಅವರಿಂದ 57 ಸಾವಿರ ರೂ. ಕಮಿಷನ್ ಹಣ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ದಿಢೀರ್ ದಾಳಿ ನಡೆಸಿ ಲಂಚ ವಶಕ್ಕೆ ಪಡೆದಿದ್ದರು.
ಈ ಘಟನೆ ಬೆನ್ನಲ್ಲೇ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮುಅವರ ಒತ್ತಡಕ್ಕೆ ಮಣಿದು ಪಿಡಿಒ ರಮ್ಯಾ ಕಮಿಷನ್ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೇಲಧಿಕಾರಿಗಳ ಹಣದ ದಾಹಕ್ಕೆ ಪಿಡಿಒಗಳು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಎಂಬ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಇಒ ಶಿವರಾಮು ಮೇಲಧಿಕಾರಿಗಳಿಗೆ ಸಲ್ಲಬೇಕಾದ ನರೇಗಾ ಕಾಮಗಾರಿಗಳ ಶೇ.10 ಕಮಿಷನ್ ಕೊಡಬೇಕೆಂದು ಚಾಕನಹಳ್ಳಿ ಪಿಡಿಒ ಫಕೀರಪ್ಪ ಅವರಿಗೆ ಒತ್ತಡ ಹಾಕಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಇದನ್ನೂ ಓದಿ:ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉಗಿದರೆ ದಂಡ
ಈ ಬೆನ್ನಲ್ಲೇ ತಾಲೂಕಿನ 43 ಗ್ರಾಪಂಗಳಲ್ಲಿ ಬಹುತೇಕ ಪಿಡಿಒಗಳು ಸಾಮೂಹಿಕ ಸಾಂದರ್ಭಿಕ ರಜೆ ಕೋರಿ ಕೆಲಸಕ್ಕೆ ಹಾಜರಾಗದೆ ಮನೆಯಲ್ಲೇ ಉಳಿದಿದ್ದರು. ಎಲ್ಲಾ ಬೆಳವಣಿಗೆಗಳ ನಂತರ ಮೇಲಧಿಕಾರಿಗಳ ಕಮೀಷನ್ ದಂಧೆ ಬೀದಿಗೆ ಬಂದು ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಬೇಕು ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮುಗೆ ತಿಂಗಳ ರಜೆ ನೀಡಿ ತನಿಖೆಗೆ ಆದೇಶ ನೀಡಿದ್ದ ಸಿಇಒ ಇಕ್ರಂ, ಈಗ ಕಮಿಷನ್ ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದತೋಕಸಂದ್ರ ಪಿಡಿಒ ರಮ್ಯಾ ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.