Advertisement

Suspension: ಯುವತಿಗೆ ಕಿರುಕುಳ; ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಅಮಾನತು

12:19 PM Dec 03, 2024 | Team Udayavani |

ಬೆಂಗಳೂರು: ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗೆ ಹೋದಾಗ ಯುವತಿಗೆ ಕಿರುಕುಳ ಹಾಗೂ ಅಸಭ್ಯ ವರ್ತನೆ ತೋರಿದ ಆರೋಪದಡಿ ಬ್ಯಾಟರಾಯನಪುರ ಪೊಲೀಸ್‌ ಠಾಣೆ ಕಾನ್‌ ಸ್ಟೇಬಲ್‌ ಕಿರಣ್‌ನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

Advertisement

21 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಿರಣ್‌ ಅವರ ವಿಚಾರಣೆ ನಡೆಸಿದ್ದು, ಮೇಲ್ನೋಟಕ್ಕೆ ಯುವತಿಯ ಆರೋಪ ನಿಜವಾಗಿದೆ ಎಂಬುದು ಗೊತ್ತಾಗಿದೆ. ಹೀಗಾಗಿ ಕಿರಣ್‌ರನ್ನು ಅಮಾನತುಗೊಳಿಸಲಾಗಿದೆ.

ಸದ್ಯದಲ್ಲೇ ಸಂತ್ರಸ್ತೆಯ ಹೇಳಿಕೆಯನ್ನು ಪಡೆಯಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಾಪೂಜಿನಗರ ನಿವಾಸಿಯಾದ ಯುವತಿ, ಉನ್ನತ ವ್ಯಾಸಂಗದ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪಾಸ್‌ಪೋರ್ಟ್‌ ಪರಿಶೀಲನೆಗಾಗಿ ಯುವತಿ ಮನೆಗೆ ಹೋಗಿದ್ದ ಕಾನ್‌ ಸ್ಟೇಬಲ್‌ ಕಿರಣ್‌, ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ಪಾಸ್‌ಪೋರ್ಟ್‌ ಅರ್ಜಿ ಸಂಬಂಧ ಪರಿಶೀಲನೆಗೆ ಬಂದಿದ್ದೇನೆ ಎಂದು ಮನೆಯ ಮುಂದಿನ ಬಾಗಿಲನ್ನು ಅರ್ಧಕ್ಕೆ ಮುಚ್ಚಿದ್ದಾನೆ. ಬಳಿಕ ನಿಮ್ಮ ಸಹೋದರ ಕ್ರಿಮಿನಲ್‌ ಹಿನ್ನೆಲೆಯುಳ್ಳವನಾಗಿದ್ದಾನೆ. ಅದರಿಂದ ನಿಮಗೆ ಪಾಸ್‌ ಪೋರ್ಟ್‌ ಸಿಗುವುದು ಕಷ್ಟ. ಆದರೆ, ನನ್ನೊಂದಿಗೆ ಸಹಕರಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಬಾಗಿಲು ಹಾಕುವಂತೆ ಸೂಚಿಸಿದ್ದಾನೆ. ಅದಕ್ಕೆ ಯುವತಿ ಒಪ್ಪದಿದ್ದಾಗ ತಾನೇ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಈ ವಿಚಾರವನ್ನು ಯಾರಿಗೂ ಹೇಳದಂತೆ ಸೂಚಿಸಿ, ಒಂದೇ ಒಂದು ಬಾರಿ ತಬ್ಬಿಕೊಳ್ಳುತ್ತೇನೆ ಎಂದು ಬಲವಂತ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಆಕೆಯ ಸಹೋದರ ಮನೆಯ ಮತ್ತೂಂದು ಕೊಠಡಿಯಲ್ಲೇ ಇದ್ದರು. ಅದನ್ನು ಗಮನಿಸಿದ ಕಾನ್‌ ಸ್ಟೇಬಲ್‌, ಕೂಡಲೇ ಮಾತು ಬದಲಿಸಿದ್ದಾನೆ. ನೀನು ನನ್ನ ಸಹೋದರಿ ಇದ್ದಂತೆ ಎಂದು, ಮನೆಯಿಂದ ಪರಾರಿಯಾಗಿದ್ದು, ಪಾಸ್‌ಪೋರ್ಟ್‌ ಬಗ್ಗೆಯೂ ಮಾಹಿತಿ ನೀಡದೆ, ನಂಬರ್‌ ಬ್ಲಾಕ್‌ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಯುವತಿ ಉಲ್ಲೇಖೀಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next