ಬೆಂಗಳೂರು: ಕೋವಿಡ್ ಜಾಗೃತಿ ಕುರಿತು ಜಾಹೀರಾತು ಫಲಕ ಅಳವಡಿಕೆ ಸಂಬಂಧ ಖಾಸಗಿ ಕಂಪನಿಗಳಿಂದ ಬಿಬಿಎಂಪಿಗೆ ಬರಬೇಕಿರುವ ಒಟ್ಟು 18 ಲಕ್ಷ ತೆರಿಗೆ ಹಣವನ್ನು ಒಂದು ವಾರದಲ್ಲಿ ವಸೂಲಿ ಮಾಡಿ ಪಾಲಿಕೆಗೆ ಪಾವತಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೋವಿಡ್ ಜಾಗೃತಿ ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡುವ ವೇಳೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿ ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪಾಲಿಕೆಗೆ ಬರಬೇಕಾದ ದಂಡದ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ಪಾಲಿಕೆಗೆ ಪಾವತಿಸಬೇಕು. ಇಲ್ಲದಿದ್ದರೆ ಆ ಮೊತ್ತವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಅರ್ಜಿಯ ಕಳೆದ ವಿಚಾರಣೆ ವೇಳೆ ಕೋವಿಡ್ ಜಾಗೃತಿಯ ಹೆಸರಿನಲ್ಲಿ ಖಾಸಗಿ ಜಾಹೀರಾತು ಅಳವಡಿಸಲಾಗಿತ್ತು. ಇದರಿಂದ ಕೋವಿಡ್ ಜಾಗೃತಿಯ ಹೋರ್ಡಿಂಗ್ಸ್ ಅಳವಡಿಸಲು ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಹಿಂಪಡೆದಿತ್ತು. ಜತೆಗೆ, ಖಾಸಗಿ ಜಾಹೀರಾತುಗಳಿದ್ದ ಫಲಕಗಳನ್ನು ಶೀಘ್ರ ತೆರವುಗೊಳಿಸಬೇಕೆಂದು ತಿಳಿಸಿತ್ತು. ಫಲಕ ಸಂಬಂಧ ಪಾಲಿಕೆಗೆ ಬೇರಬೇಕಿದ್ದ ಒಟ್ಟು 18,04,638 ರೂ. ತೆರಿಗೆ ಹಣವನ್ನು ವಸೂಲಿ ಮಾಡಿ ಬಿಬಿಎಂಪಿಗೆ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಇದನ್ನೂ ಓದಿ : ಹೆಂಡತಿಯನ್ನು ಕತ್ತರಿಯಿಂದ ಇರಿದು ಕೊಂದು ಮೃತದೇಹದ ಬಳಿ ಕುಳಿತು ವಿಡಿಯೋ ಗೇಮ್ ಆಡಿದ ಪತಿರಾಯ
ಆದರೆ, ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ ನ್ಯಾಯಾಲಯದ ಆದೇಶ ಪಾಲಿಸಿ ಪ್ರಮಾಣಪತ್ರ ಸಲ್ಲಿಸಲು ಸರ್ಕಾರ ವಿಫಲವಾಯಿತು. ಇದಕ್ಕೆ ಅಸಮಾಧಾನಗೊಂಡ ನ್ಯಾಯಪೀಠ,ಕೋರ್ಟ್ ಷರತ್ತು ಉಲ್ಲಂ ಸಿ ಜಾಹೀರಾತು ಅಳವಡಿಸಲು ಖಾಸಗಿಯವರಿಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಯಿಂದ ವಿಚಾರಣೆ ನಡೆಸಿಲ್ಲ. ತಪ್ಪಿತಸ್ಥರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಿಲ್ಲ. ಬಿಬಿಎಂಪಿಗೆ ಖಾಸಗಿ ಕಂಪನಿಗಳಿಗೆ ಬರೆಬೇಕಿದ್ದ 18 ಲಕ್ಷ ತೆರಿಗೆ ಹಣವನ್ನೂ ವಸೂಲಿ ಮಾಡಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ನಂತರ ಖಾಸಗಿ ಕಂಪನಿಗಳಿಂದ ಪಾಲಿಕೆಗೆ ಬರಬೇಕಿರುವ ಒಟ್ಟು 18 ಲಕ್ಷ ತೆರಿಗೆ ಹಣವನ್ನು ಒಂದು ವಾರದೊಳಗೆ ಸಂಬಂಧಪಟ್ಟವರಿಂದ ವಸೂಲಿ ಮಾಡಿ ಪಾವತಿಸಬೇಕು. ಹಾಗೆಯೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ವರದಿಯನ್ನೂ ಡಿ.15ರೊಳಗೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.