Advertisement

ಬಸವನಬಾಗೇವಾಡಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ: ಪಾಟೀಲ

03:10 PM Feb 26, 2018 | |

ಬಸವನಬಾಗೇವಾಡಿ: 2018ರ ವಿಧಾನಸಭಾ ಚುನಾವಣೆಗೆ ಬಸವನಬಾಗೇವಾಡಿ ಮತಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ
ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಹೇಳಿದರು. ರವಿವಾರ ತಾಲೂಕಿನ ಮುಳವಾಡ ಗ್ರಾಮದ ಮಲ್ಲಿಕಾರ್ಜುನ ಪ್ರೌಢ ಶಾಲೆ ಆವರಣದಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕ್ಷೇತ್ರದಲ್ಲಿ ಕೆಲವರು ಬಸವನಬಾಗೇವಾಡಿ ಮತಕ್ಷೇತ್ರವನ್ನು ತೊರೆಯುತ್ತಾರೆ ಮತ್ತು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿ ಹಬ್ಬಿಸಿದ್ದು ಕ್ಷೇತ್ರದ ಜನತೆ ಕಿವಿಗೊಡಬಾರದು. 2018ರ ವಿಧಾನಸಭಾ ಚುನಾವಣೆಗೆ ಬಸವನಬಾಗೇವಾಡಿ ಮತಕ್ಷೇತ್ರ ದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದರು.

2013ರ ಚುನಾಚಣೆಯಲ್ಲಿ ಕ್ಷೇತ್ರದ ಜನತೆ ಸುಮಾರು 20 ಸಾವಿರ ಮತಗಳ ಅಂತರದಿಂದ ನನ್ನನ್ನು ಆಯ್ಕೆ ಮಾಡಿದ್ದಿರಿ. ನಿಮ್ಮ ಋಣ ತೀರಿಸಲು ಕಳೆದ 5 ವರ್ಷದಿಂದ ಕ್ಷೇತ್ರದಲ್ಲಿ ರಸ್ತೆ, ವಿದ್ಯುತ್‌, ಶೈಕ್ಷಣಿಕ, ಪ್ರವಾಸೋದ್ಯಮ, ಕುಡಿಯುವ ನೀರು, ಸಾರಿಗೆ, ನೀರಾವರಿ ಯೋಜನೆಗಳು, ಔದ್ಯೋಗಿಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡು ತಮ್ಮ ಋಣ ತೀರಿಸಲು ಪ್ರಾಮಾಣಿಕ ಕಾರ್ಯ ಮಾಡಿದ್ದೇನೆ. ಚುನಾವಣೆಯಲ್ಲಿ ಮತ್ತೆ ಆಯ್ಕೆ ಮಾಡಿದರೆ ಬಸವಣ್ಣನವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಿಮ್ಮ ಋಣಕ್ಕೆ
ಚ್ಯುತಿ ಬರದ ಹಾಗೇ ಪ್ರಾಮಾಣಿಕವಾಗಿ ಮತಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೇರಿರುವ ಜನಸ್ತೋಮ ನೋಡಿ ನನಗೆ ತುಂಬಾ ಖುಷಿಯಾಗಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಹಾಗೂ ನನ್ನ ಕುಟುಂಬದ ಮೇಲಿರಲಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಜೀವನ ಉದ್ದಕ್ಕೂ ನಾನೆಂದು ಮತ್ತು ನನ್ನ ಕುಟುಂಬದವರು ಚ್ಯುತಿ ಬರದ ಹಾಗೇ ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭಾ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ, ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವಾ, ಮಾಜಿ ಸಚಿವರಾದ ರಹಮಾನ್‌ ಖಾನ್‌, ಸಿ.ಎಂ. ಇಬ್ರಾಹಿಂ, ಸಚಿವ ಡಿ.ಕೆ. ಶಿವಕುಮಾರ, ಬಿ.ಕೆ. ಹರಿಪ್ರಸಾರ, ಕೆ.ಎಚ್‌. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಮುದ್ದೇಬಿಹಾಳ ಶಾಸಕ ಸಿ.ಎಸ್‌. ನಾಡಗೌಡ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಬಸವನಬಾಗೇವಾಡಿ, ಕೊಲ್ಹಾರ ಬ್ಲಾಕ್‌ ಅಧ್ಯಕ್ಷರು ಸೇರಿದಂತೆ ಅನೇಕರು ಇದ್ದರು.

ಭಾರಿ ಜನಸ್ತೋಮ: ಜನಾಶೀರ್ವಾದ ಕಾರ್ಯಕ್ರಮದಲ್ಲಿ ಸುಮಾರು 30ರಿಂದ 40 ಸಾವಿರ ಜನರು ಭಾಗವಹಿಸಿದ್ದರು. ಮುಳವಾಡ
ಗ್ರಾಮದ ಮಲ್ಲಿಕಾರ್ಜುನ ಪ್ರೌಢ ಶಾಲೆಯ 4 ಎಕರೆ ಜಾಗೆಯಲ್ಲಿ ಬೃಹತ್‌ ವೇದಿಕೆ ಹಾಕಲಾಗಿತ್ತು. ಈ ಜಾಗೆ ತುಂಬಿದ ಬಳಿಕ
ಮುಳವಾಡದಿಂದ ಕೊಲ್ಹಾರಕ್ಕೆ ತೆರಳುವ ರಸ್ತೆ ಮೇಲೆ ವೇದಿಕೆ ನಿರ್ಮಿಸಿ ಅಲ್ಲಿ ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ಇದರ ಮಧ್ಯೆಯೂ ಸಾವಿರಾರು ಜನರಿಗೆ ಆಸನ ಸಿಗದ ಕಾರಣ ಕೆಲವರು ನಿಂತು ಭಾಷಣ ವೀಕ್ಷಿಸಿದರೆ ಇನ್ನೂ ಯುವಕರು ಶಾಲಾ ಆವರಣದಲ್ಲಿ ಇರುವ ಗಿಡಗಳ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

Advertisement

ಬಸವನಬಾಗೇವಾಡಿ ಕ್ಷೇತ್ರದಿಂದ ಆಗಮಿಸಿದ ಸಹಸ್ರಾರು ಕಾಂಗ್ರೆಸ್‌ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಮತ್ತು ಕಾರ್ಯಕ್ರಮ
ವೀಕ್ಷಿಸಲು ಬಂದ ಜನತೆಗೆ ತಂಪಾದ ಕುಡಿಯುವ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next