Advertisement

ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

10:46 AM Feb 23, 2019 | |

ಶಿವಮೊಗ್ಗ: ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡ ಯಶಸ್ವಿ ರಾಷ್ಟ್ರ ಭಾರತ. ಈ ಯಶಸ್ಸು ಲಭಿಸಿರುವುದು ಜನಸಾಮಾನ್ಯರ ಭಾಗವಹಿಸುವಿಕೆಯಿಂದ. ಪ್ರಜಾಪ್ರಭುತ್ವದ ಉಳಿವು ಹಾಗೂ ಅಸ್ತಿತ್ವಕ್ಕಾಗಿ ಅರ್ಹ ವಯಸ್ಕರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಹೇಳಿದರು.

Advertisement

ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಡಯಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಹಂತದ ಮತದಾರರ ಸಾಕ್ಷರತಾ ಸಂಘ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

 ಚುನಾವಣೆಗಳ ಕುರಿತು ಜನಸಾಮಾನ್ಯರಲ್ಲಿ ಅಂತಃಪ್ರಜ್ಞೆ, ರಾಜಕೀಯ ಪ್ರಜ್ಞೆ ಜಾಗೃತಿಗೊಳಿಸುವ ಅಗತ್ಯವಿದೆ. ಅಷ್ಟೇ ಅಲ್ಲದೇ ಆಸೆ, ಆಮಿಷಗಳಿಗೆ ಒಳಗಾಗದೆ, ನಿರ್ಭೀತಿಯಿಂದ ತಮಗೆ ಇಷ್ಟವಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ನೈತಿಕ ಮತದಾನದ ಕುರಿತು, ಮತ ಚಲಾಯಿಸಲು ತಿಳುವಳಿಕೆ ನೀಡಬೇಕಾದ ಹಾಗೂ ರಾಮರಾಜ್ಯದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ ಎಂದರು.

ಅನಗತ್ಯವಾದ ವಿಷಯಗಳ ಬಗ್ಗೆ ಚರ್ಚಿಸುವ, ಕಾಲಹರಣ ಮಾಡುವ ಇಂದಿನ ಯುವ ಪೀಳಿಗೆ ತಮ್ಮ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿಯಬೇಕು. ಚುನಾವಣೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿ ಬಾಲ್ಯದಿಂದಲೇ ಅರಿವು ಮೂಡಿಸುವ ಸದುದ್ದೇಶದಿಂದ ಪಠ್ಯಕ್ರಮದಲ್ಲಿ ರಾಜನೀತಿಯನ್ನು ಅಳವಡಿಸಿದೆ. ಆದರೆ ಪಠ್ಯವನ್ನು ಅಭ್ಯಸಿಸಿದ ಯುವಕರು ಅದನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂಬುದು ಬೇಸರದ ಸಂಗತಿ. ಮಕ್ಕಳಲ್ಲಿ ರಾಜಕೀಯ ಅರಿವು ಮೂಡಿಸುವುದು ಕೂಡ ಅನೇಕ ಮಹತ್ವದ ವಿಷಯಗಳಲ್ಲೊಂದಾಗಿದೆ ಎಂದರು.

ಮತದಾರರಿಗೆ ಗುರುತಿನ ಚೀಟಿ, ಮತದಾನ ನಕಲು ತಡೆಗೆ, ನೋಟಾ, ಮತಪತ್ರದ ದುರುಪಯೋಗ ತಡೆಯಲು ತಾಂತ್ರಿಕವಾಗಿ ಸುಧಾರಿತ ಇವಿಎಂ ಯಂತ್ರಗಳ ಬಳಕೆ, ವಿವಿ ಪ್ಯಾಟ್‌ ಬಳಕೆ, ಮೊಬೈಲ್‌ ಆ್ಯಪ್‌, ಚುನಾವಣೆ ಆ್ಯಪ್‌, ಸಿ.ವಿಜನ್‌ ಆ್ಯಪ್‌ ಮುಂತಾದವುಗಳನ್ನು ಚುನಾವಣಾ ಆಯೋಗ ಪರಿಚಯಿಸಿದೆ ಎಂದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸುಮಂಗಲಾ ಪಿ. ಕುಚಿನಾಡ, ಡಯಟ್‌ನ ಉಪ ಪ್ರಾಂಶುಪಾಲ ವೀರಭದ್ರಪ್ಪ, ಸಂಪನ್ಮೂಲ ವ್ಯಕ್ತಿ ಜಿ.ವಿ. ಹರಿಪ್ರಸಾದ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next