ಗಂಗಾವತಿ: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಸೋಮವಾರ ಚುನಾವಣಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಇವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಮುನವಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರ ಹಿರಿಯ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸಲಾಗಿದೆ. ಏ.19 ರಂದು ಮತದಾರರು ಅಭಿಮಾನಿಗಳ ಜತೆ ಸೇರಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುತ್ತದೆ.
ಗಂಗಾವತಿ ಕ್ಷೇತ್ರದಲ್ಲಿ ಎರಡು ಬಾರಿ ಚುನಾಯಿತರಾಗಿದ್ದು, ಜನರಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಕಡೆಬಾಗಿಲು ಸೇತುವೆ, ಇಂಜಿನಿಯರಿಂಗ್ ಕಾಲೇಜು, ಕೃಷಿ ಮಹಾವಿದ್ಯಾಲಯ ಮಂಜೂರು ಮಾಡಲಾಗಿದೆ.
ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು 120 ಕೋಟಿ ರೂ.ಮಂಜೂರು ಮಾಡಲಾಗಿದೆ. ಆದಿಶಕ್ತಿ ದೇಗುಲದ ಗೋಶಾಲೆ ಸರಕಾರದ ಅನುದಾನ ಕಲ್ಪಿಸಲಾಗಿದೆ. ಅಮೃತ ಸಿಟಿಯೋಜನೆ ಸೇರಿ ಗಂಗಾವತಿ ನಗರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನೆಕ್ಕಂಟಿ ಸೂರಿಬಾಬು, ಕಳಕನಗೌಡ,ಎಚ್. ಪ್ರಭಾಕರ,ಮರಿಯಪ್ಪ ಕುಂಟೋಜಿ ಇದ್ದರು.