ಕೊಪ್ಪಳ: ವಿಶ್ವವಿಖ್ಯಾತಿಯ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀ ಅಂಜನಾದ್ರಿ ಬೆಟ್ಟದಲ್ಲಿ ಡಿ.13ರ ಶುಕ್ರವಾರ ಬೆಳಗಿನ ಜಾವದಿಂದಲೇ ಹನುಮನ ಮಾಲಾಧಾರಿಗಳು ಬೆಟ್ಟವನ್ನೇರಿ ಮಾಲೆ ವಿಸರ್ಜನೆ ಮಾಡಿ ಶ್ರೀ ಆಂಜನೇಯನಿಗೆ ಶ್ರದ್ಧಾಪ್ತಿಯಿಂದ ನಮಿಸಿದ ದೃಶ್ಯ ಕಂಡುಬಂದಿತು.
ಐತಿಹಾಸಿಕ ಪ್ರಸಿದ್ಧಿ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಪ್ರದೇಶದ ಅಂಜನಾದ್ರಿ ಬೆಟ್ಟದಲ್ಲಿ ವೀರ ಆಂಜನೇಯ ಜನಿಸಿದ ತಪ್ಪೋ ಭೂಮಿ ಎಂದು ಎಲ್ಲೆಡೆಯೂ ಪ್ರಸಿದ್ಧಿ ಪಡೆದಿದೆ. ಜಗತ್ತಿನ ನಾನಾ ದೇಶಗಳ ಭಕ್ತರು, ಪ್ರವಾಸಿಗರು, ಇತಿಹಾಸ ತಜ್ಞರು, ಆಸಕ್ತರು ದೇಶದ ಗಣ್ಯ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಶ್ರೀ ಆಂಜನೇಯನ ಸದ್ಭಕ್ತರು ದೇಶದ ಮೂಲೆ ಮೂಲೆಗಳಿಂದಲೂ ಇಲ್ಲಿನ ಕಿಷ್ಕಿಂದೆ ಪ್ರದೇಶದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ಬೆಟ್ಟವನ್ನೇರಿ ಶ್ರೀ ಆಂಜನೇಯನ ದರ್ಶನ ಪಡೆಯುತ್ತಿದ್ದಾರೆ. ಅಂಜನಾದ್ರಿ ಬೆಟ್ಟ ಇಂದು ವಿಶ್ವವಿಖ್ಯಾತಿ ಪಡೆದು ಜಗತ್ತಿನ ಗಮನವನ್ನೇ ಸೆಳೆದಿದೆ.
ವರ್ಷದಿಂದ ವರ್ಷಕ್ಕೆ ಆಂಜನೇಯನ ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿದೆ 2008 ರಲ್ಲಿ ಅಂಜನಾದ್ರಿ ಬೆಟ್ಟದಲ್ಲಿ 12 ಜನರಿಂದ ಆರಂಭವಾದ ಹನುಮಮಾಲೆ ಧಾರಣೆ ಆರಂಭವಾದ ಸಂಪ್ರದಾಯವು ಈಗ ಲಕ್ಷಾಂತರ ಮಾಲಾಧಾರಿಗಳ ಸಂಖ್ಯೆಗೆ ಬಂದು ತಲುಪಿದೆ. ಕಳೆದ ವರ್ಷ 1,25,000ಕ್ಕೂ ಹೆಚ್ಚು ಮಾಲಾಧಾರಿಗಳು ಹನುಮನ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ಶ್ರದ್ಧಾಭಕ್ತಿಯಿಂದ ಬೆಟ್ಟವನ್ನೇರಿ ಮಾಲೆ ವಿಸರ್ಜನೆ ಮಾಡಿ ನಿರ್ಗಮಿಸಿರುವುದು ಇತಿಹಾಸವೇ ಸರಿ. ಇತ್ತೀಚೆಗಿನ ವರ್ಷಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯೋ ವೃದ್ಧರ ವರೆಗೂ ಹನುಮನ ಮಾಲೆ ಧರಿಸುತ್ತಿರುವುದು ಗಮನಾರ್ಹ ಸಂಗತಿ.
ಅದರಂತೆ ಈ ವರ್ಷವೂ ಸಹಿತ ಲಕ್ಷಾಂತರ ಮಾಲಾಧಾರಿಗಳು ತಮ್ಮ ಇಷ್ಟದ ದಿನಗಳಷ್ಟು ಮಾಲೆಯನ್ನು ಧರಿಸಿದ್ದು ಶುಕ್ರವಾರ ಬೆಟ್ಟದಲ್ಲಿ ಮಾಲೆ ವಿಸರ್ಜನೆಗೆ ತಮ್ಮ ತಮ್ಮ ಊರುಗಳಿಂದ ಪಾದಯಾತ್ರೆಯಲ್ಲಿ ಟಂಟಂ, ಮಿನಿಬಸ್ ಸೇರಿ ವಿವಿಧ ವಾಹನಗಳ ಮೂಲಕ ರಾಜ್ಯದ ನಾನಾ ಭಾಗಗಳಿಂದ ಹಾಗೂ ಅನ್ಯ ರಾಜ್ಯಗಳಿಂದಲೂ ಅಂಜಿನಾದ್ರಿ ಬೆಟ್ಟಕ್ಕೆ ಆಗಮಿಸಿ ಮಾಲೆ ವಿಸರ್ಜನೆ ಮಾಡುತ್ತಿದ್ದಾರೆ.
ಶುಕ್ರವಾರ ಬೆಳಗಿನ ಜಾವವೇ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟವನ್ನೇರಿದ್ದಾರೆ. ಮಾಲೆ ವಿಸರ್ಜನೆಗೆಗೆ ಮುಂದಾಗಿದ್ದಾರೆ. ಹನುಮನ ಮಾಲಾಧಾರಿಗಳಿಗೆ ಯಾವುದೇ ಕುಂದುಕೊರತೆ ಬಾರದಂತೆ ಕೊಪ್ಪಳ ಜಿಲ್ಲಾಡಳಿತ, ಗಂಗಾವತಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಕಲ ವ್ಯವಸ್ಥೆ ಮಾಡಿ ಮಾಲಾಧಾರಿಗಳಿಗೆ ಸೌಕರ್ಯ ಕಲ್ಪಿಸಿವೆ. ಮಾಲಾಧಾರಿಗಳು ಸಹಿತ ಬೆಟ್ಟವನ್ನೇರಿ ಮಾಲೆ ವಿಸರ್ಜನೆ ಮಾಡುತ್ತಿದ್ದಾರೆ.