Advertisement

ಮನಪಾ ಶೀಘ್ರ “ಪೇಪರ್‌ಲೆಸ್‌’

10:00 AM Aug 30, 2018 | Team Udayavani |

ಮಂಗಳೂರು: ಗಣಕೀಕರಣ, ಸ್ವಯಂ ಚಾಲಿತ, ಏಕಗವಾಕ್ಷಿ ಸೌಲಭ್ಯಗಳ ಮೂಲಕ ಮಂಗಳೂರು ಮಹಾನಗರ ಪಾಲಿಕೆಯಲ್ಲಿ “ಪೇಪರ್‌ ಲೆಸ್‌ ಆಡಳಿತ’ವನ್ನು ಶೀಘ್ರದಲ್ಲಿ ಅನುಷ್ಠಾನಿಸಲಾಗುವುದು ಎಂದು ನಗರಾಭಿವೃದ್ಧಿ, ವಸತಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

ಪಾಲಿಕೆ ವ್ಯಾಪ್ತಿಯಲ್ಲಿ 472 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ ಹಾಗೂ ಪುರಭವನಕ್ಕೆ “ಕುದ್ಮಲ್  ರಂಗರಾವ್‌ ಪುರಭವನ’ ಎಂಬ ನಾಮ ಕರಣ ಕಾರ್ಯಗಳನ್ನು ಪುರಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅವರು ನೆರವೇರಿಸಿ ಮಾತನಾಡಿದರು.

ವಿವಿಧ ಅನುದಾನಗಳ ಸಮರ್ಪಕ ಬಳಕೆಯೊಂದಿಗೆ ಸೂಚಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣ  ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಜನ ಪರ ಸ್ಪಂದನೆ ರೂಢಿಸಿ ಕೊಳ್ಳ ಬೇಕೆಂದರು.  ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳಿಂದ 5 ವರ್ಷಕ್ಕೆ 1,000 ಕೋಟಿ ರೂ. ದೊರೆಯಲಿದೆ. ಯೋಜನೆ ಅನುಷ್ಠಾನಕ್ಕೆ ತನ್ನ ಅಧ್ಯಕ್ಷತೆಯ ಸಲಹಾ ಸಮಿತಿ ರಚನೆ ಯಾಗಿದೆ. ಮಂಗಳೂರು ದೇಶಕ್ಕೇ ಮಾದರಿ ಯಾಗಬೇಕೆಂದರು. ಪುರ ಭವನಕ್ಕೆ ಕುದ್ಮಲ್  ರಂಗರಾವ್‌ ನಾಮಕರಣ ಸೂಕ್ತವೆಂದರು.

ಪಂಪ್‌ವೆಲ್‌ ಶೀಘ್ರ ಪೂರ್ಣ: ನಳಿನ್‌
ವಿಶೇಷ ಅತಿಥಿಯಾಗಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಪಂಪ್‌ವೆಲ್‌ ಜಂಕ್ಷನ್‌ ಕಾಮಗಾರಿಯ ಬಗ್ಗೆ ತಾನು ಕೇಂದ್ರ ಸಚಿವರ ಗಮನ ಸೆಳೆದಿದ್ದು ಮುಂದಿನ ಜನವರಿಯೊಳಗೆ ಕೆಲಸ ಪೂರ್ಣವಾಗಲಿದೆ ಎಂದರು. ರೈಲ್ವೇ ಇಲಾಖೆಯು ಮಹಾಕಾಳಿಪಡು ಮುಂತಾದ ಯೋಜನೆಗಳಿಗೆ ಸ್ಪಂದಿಸಿದೆ. ರಾಜ್ಯ ಸರಕಾರ, ಪಾಲಿಕೆಯ ಸಹಕಾರದಿಂದ ಅಗತ್ಯ ಕಾರ್ಯಗಳು ಕ್ಷಿಪ್ರವಾಗಿ ನಡೆಯಲು ಸಾಧ್ಯವೆಂದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಇಂದಿನ ಯೋಜನೆಗಳು ನಿರ್ಣಾಯಕವೆಂದರು. ಮೇಯರ್‌ ಭಾಸ್ಕರ್‌ ಕೆ. ಕೃತಜ್ಞತೆ ವ್ಯಕ್ತಪಡಿಸಿದರು. ಉಪ ಮೇಯರ್‌ ಕೆ. ಮಹಮ್ಮದ್‌, ಪಾಲಿಕೆಯ ಸ್ಥಾಯೀ ಸಮಿತಿಗಳ ಅಧ್ಯಕ್ಷರಾದ ಟಿ. ಪ್ರವೀಣ್‌ಚಂದ್ರ ಆಳ್ವ, ನವೀನ್‌ ಆರ್‌. ಡಿ’ಸೋಜಾ, ಲತಾ ಸಾಲ್ಯಾನ್‌, ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೊರೇಟರ್‌ ಕೆ. ದಿವಾಕರ ಮುಖ್ಯ ಅತಿಥಿಗಳಾಗಿದ್ದರು. ಉಪ ಆಯುಕ್ತ ರಂಗನಾಥ ನಾಯಕ್‌, ಇಇ ಕೆ. ಎಸ್‌. ಲಿಂಗೇಗೌಡ, ಎಇಇ ಎಸ್‌. ರವಿಶಂಕರ್‌ ಉಪಸ್ಥಿತರಿದ್ದರು. ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ಸ್ವಾಗತಿಸಿದರು. ಆಯುಕ್ತ ಮೊಹಮ್ಮದ್‌ ನಜೀರ್‌ ವಂದಿಸಿದರು. 

Advertisement

ಜತೆ ಜತೆಯಲಿ…
ಕುದ್ಮಲ್ ರಂಗರಾವ್‌ ಪುರಭವನದಲ್ಲಿ ಜರಗಿದ ಸಮಾರಂಭ ಕಾಂಗ್ರೆಸ್‌- ಬಿಜೆಪಿಯ ಜನಪ್ರತಿನಿಧಿಗಳು ಅಭಿವೃದ್ಧಿ ಯೋಜನೆಗಳಿಗೆ ಪರಸ್ಪರರ ಸ್ಪಂದನೆಯ ಶ್ಲಾಘನೆಯೊಂದಿಗೆ ಆದರ್ಶ ಮಂಗಳೂರು ನಗರ ನಿರ್ಮಾಣಕ್ಕೆ “ಜತೆ ಜತೆಯಲಿ’ ಸಾಗುವ ಭರವಸೆ ನೀಡಿತು! ಯೋಜನೆಗಳ ಕ್ರೆಡಿಟ್‌ ಪಡೆಯಲು ಒಮ್ಮೊಮ್ಮೆ ಮುಂದಾದರೂ ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ ಎಂದು ಖಾದರ್‌, ನಳಿನ್‌, ಭಾಸ್ಕರ್‌, ಕಾಮತ್‌ ಸ್ಪಷ್ಟಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next