ಕಾಪು : ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು, ಸದಸ್ಯರಾದ ಹರೀಶ್ ನಾಯಕ್ ಕಾಪು, ಮಹಮದ್ ಸಾಧಿಕ್, ಲಕ್ಷ್ಮೀಶ ತಂತ್ರಿ ಕಲ್ಯ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ , ಕಾಪು ಪುರಸಭೆ ಮತ್ತು ಸುತ್ತಮುತ್ತಲಿನ ಜನರಿಗೆ ಮೂಲಸೌಕರ್ಯಗಳ ಜೋಡಣೆ ಮತ್ತು ಅಭಿವೃದ್ಧಿಯ ಉದ್ದೇಶದೊಂದಿಗೆ ಪ್ರಾಧಿಕಾರವನ್ನು ರಚಿಸಲಾಗಿತ್ತು. ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು ಹತ್ತು ವರ್ಷ ಕಳೆದರೂ ಈವರೆಗೂ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ. ನೂತನ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ ಜತೆಗೂಡಿ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಮನವಿ ಮಾಡಿದರು.
ಅಧ್ಯಕ್ಷ ವಿಕ್ರಂ ಕಾಪು ಮಾತನಾಡಿ, ಪ್ರಾಧಿಕಾರದಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಕಾಪು ಪುರಸಭೆ ಮತ್ತು ಸುತ್ತಮುತ್ತಲಿನ ಎಂಟು ಗ್ರಾಮಗಳ ಜನರೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು, ಸದಸ್ಯರು, ಜನಪ್ರತಿನಿಧಿಗಳು ಮತ್ತು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ಮಾರ್ಗದರ್ಶನದಡಿ ಕಾರ್ಯನಿರ್ವಹಿಸಲು ಬದ್ಧನಿದ್ದೇನೆ ಎಂದರು.
ಪ್ರಾಧಿಕಾರದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್ ಶುಭಾಶಂಸನೆಗೈದರು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಸರಸು ಡಿ. ಬಂಗೇರ, ದೀಪಕ್ ಕುಮಾರ್ ಎರ್ಮಾಳು, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.